ಪಾಕಿಸ್ತಾನದ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವೇ?: ಅಂತಾರಾಷ್ಟ್ರೀಯ ನಿಗಾವಣೆಗೆ ರಾಜನಾಥ್ ಸಿಂಗ್ ಆಗ್ರಹ
ರಾಜನಾಥ್ ಸಿಂಗ್ | PTI
ಶ್ರೀನಗರ: ಜಮ್ಮುಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್ಗೆ ಭೇಟಿ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಕೈಯಲ್ಲಿ ಅಣ್ವಸ್ತ್ರಗಳು ಸುರಕ್ಷಿತವೇ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಅಣ್ವಸ್ತ್ರಗಳ ಮೇಲೆ ಅಂತಾರಾಷ್ಟ್ರೀಯ ನಿಗಾವಣೆಗೆ ಆಗ್ರಹಿಸಿದ್ದಾರೆ.
ಈ ಭೇಟಿಯ ವೇಳೆ ಸೇನಾ ತುಕಡಿಗಳೊಂದಿಗೆ ಮಾತುಕತೆ ನಡೆಸಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಪುನರಾವರ್ತಿತ ಹಾಗೂ ಬೇಜವಾಬ್ದಾರಿ ಅಣ್ವಸ್ತ್ರ ಬೆದರಿಕೆಯ ಬಗ್ಗೆ ಜಾಗತಿಕ ನಿಗಾವಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಅಣ್ವಸ್ತ್ರಗಳ ಮೇಲೆ ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ(IAEA) ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ʼನಮ್ಮ ಸೇನೆಯು ಯಾವುದಾದರೂ ಗುರಿಯ ಮೇಲೆ ದಾಳಿ ಮಾಡಿದಾಗ, ಅದು ನಿಖರವಾಗಿರುತ್ತದೆ ಹಾಗೂ ಅದನ್ನು ಲೆಕ್ಕ ಮಾಡುವ ಕೆಲಸವನ್ನು ಶತ್ರುಗಳಿಗೆ ಬಿಡುತ್ತದೆ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ನಾವು ಅಣ್ವಸ್ತ್ರದ ಬೆದರಿಕೆಗೂ ಜಗ್ಗದಿರುವ ಸಂಗತಿಯು, ಇಂದು ಭಯೋತ್ಪಾದನೆಯ ವಿರುದ್ಧದ ಭಾರತದ ಶಪಥ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ತೋರಿಸುತ್ತಿದೆ. ಪಾಕಿಸ್ತಾನವು ಎಷ್ಟು ಬೇಜವಾಬ್ದಾರಿಯಿಂದ ಭಾರತಕ್ಕೆ ಬೆದರಿಕೆ ಒಡ್ಡಿತು ಎಂಬುದನ್ನು ಇಡೀ ಜಗತ್ತೇ ನೋಡಿದೆ ಎಂದು ಹೇಳಿದರು.