×
Ad

2018ರಲ್ಲಿ ಸರಕಾರಕ್ಕೆ 2-3 ಲ.ಕೋ.ರೂ.ವರ್ಗಾವಣೆಗೆ ಆರ್‌ಬಿಐ ನಿರಾಕರಿಸಿತ್ತು : ವಿರಳ ಆಚಾರ್ಯ

Update: 2023-09-06 23:42 IST

ವಿರಳ ಆಚಾರ್ಯ| Photo: PTI 

ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಿಗೆ ಕೇವಲ ಒಂದು ವರ್ಷ ಮೊದಲು 2018ರಲ್ಲಿ ಸರಕಾರ ಮತ್ತು ಭಾರತೀಯ ರಿಜರ್ವ್ ಬ್ಯಾಂಕ್ ನಡುವೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿದ್ದ ಘಟನೆಗಳ ಕುರಿತು ಹೆಚ್ಚಿನ ವಿವರಗಳನ್ನು ಆರ್‌ಬಿಐನ ಮಾಜಿ ಡೆಪ್ಯೂಟಿ ಗವರ್ನರ್ ವಿರಳ ಆಚಾರ್ಯ ಅವರು ಹಂಚಿಕೊಂಡಿದ್ದಾರೆ.

ಆಚಾರ್ಯ 2020ರಲ್ಲಿ ಪ್ರಕಟಗೊಂಡಿದ್ದ ತನ್ನ ‘ಕ್ವೆಸ್ಟ್ ಫಾರ್ ರಿಸ್ಟೋರಿಂಗ್ ಫೈನಾನ್ಶಿಯಲ್ ಸ್ಟೆಬಿಲಿಟಿ ’ ಕೃತಿಗೆ ನವೀಕರಿಸಿದ ಮುನ್ನುಡಿಯಲ್ಲಿ, ಚುನಾವಣಾ ಪೂರ್ವ ವೆಚ್ಚಕ್ಕಾಗಿ ತನ್ನ ನಿಧಿಯಿಂದ 2-3 ಲ.ಕೋ.ರೂ.ಗಳನ್ನು ವರ್ಗಾಯಿಸುವಂತೆ ಕೇಂದ್ರ ಸರಕಾರದ ಪ್ರಸ್ತಾವವನ್ನು ಆರ್‌ಬಿಐ ನಿರಾಕರಿಸಿತ್ತು ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ.

ಮಾಧ್ಯಮ ವರದಿಯಂತೆ ನೂತನ ಮುನ್ನುಡಿಯಲ್ಲಿನ ವಿವರಗಳು 2024ರ ಸಾರ್ವತ್ರಿಕ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಸರಕಾರದ ಹೆಚ್ಚಿನ ವೆಚ್ಚಕ್ಕಾಗಿ ಬೇಡಿಕೆಗಳೊಂದಿಗೆ ಹೊಂದಿಕೆಯಾಗುತ್ತವೆ. ವಿತ್ತವರ್ಷ 2023-24ರ ಮೊದಲ ಐದು ತಿಂಗಳುಗಳಲ್ಲಿ ತೆರಿಗೆ ಸಂಗ್ರಹಗಳಲ್ಲಿ ಅತ್ಯಲ್ಪ ಬೆಳವಣಿಗೆಯಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

2018ರಲ್ಲಿ ಆರ್‌ಬಿಐ ಮತ್ತು ಸರಕಾರದ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದ್ದ ಘಟನಾವಳಿಗಳನ್ನು ಆಚಾರ್ಯ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾರೆ. 2019ರಲ್ಲಿ ತನ್ನ ಅಧಿಕಾರಾವಧಿ ಪೂರ್ಣಗೊಳ್ಳುವ ಆರು ತಿಂಗಳುಗಳ ಮೊದಲೇ ಆಚಾರ್ಯ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನುವುದನ್ನು ಇಲ್ಲಿ ಗಮನಿಸಬಹುದು. ಅದಕ್ಕಿಂತ ಒಂದು ವರ್ಷ ಮೊದಲು ಊರ್ಜಿತ್ ಪಟೇಲ್ ಅವರು ಆರ್‌ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಹಿಂದಿನ ಸರಕಾರಗಳ ಅವಧಿಯಲ್ಲಿ ಆರ್‌ಬಿಐ ಸಂಗ್ರಹಿಸಿದ್ದ ಗಣನೀಯ ಮೊತ್ತವನ್ನು ಪ್ರಸ್ತುತ ಸರಕಾರದ ಖಾತೆಗೆ ವರ್ಗಾಯಿಸಲು ‘ಅಧಿಕಾರಶಾಹಿ ಮತ್ತು ಸರಕಾರ’ದಲ್ಲಿನ ಕ್ರಿಯಾಶೀಲ ವ್ಯಕ್ತಿಗಳು ಯೋಜನೆಯನ್ನು ರೂಪಿಸಿದ್ದರು ಎಂದು ಆಚಾರ್ಯ ಮುನ್ನುಡಿಯಲ್ಲಿ ಹೇಳಿದ್ದಾರೆ.

ಆರ್‌ಬಿಐ ಪ್ರತಿ ವರ್ಷ ತನ್ನ ಗಳಿಕೆಯನ್ನು ಸಂಪೂರ್ಣವಾಗಿ ಸರಕಾರಕ್ಕೆ ಒಪ್ಪಿಸುವ ಬದಲು ಅದರ ಒಂದು ಭಾಗವನ್ನು ಮೀಸಲು ನಿಧಿಗೆ ಹಂಚಿಕೆ ಮಾಡುತ್ತದೆ ಎಂದು ಹೇಳಿರುವ ಆಚಾರ್ಯ, ನೋಟು ನಿಷೇಧಕ್ಕೆ ಹಿಂದಿನ ಮೂರು ವರ್ಷಗಳಲ್ಲಿ ಆರ್‌ಬಿಐ ದಾಖಲೆಯ ಲಾಭವನ್ನು ಸರಕಾರಕ್ಕೆ ವರ್ಗಾಯಿಸಿತ್ತು ಎಂದು ಬೆಟ್ಟು ಮಾಡಿದ್ದಾರೆ.

ನೋಟು ನಿಷೇಧದ ವರ್ಷದಲ್ಲಿ ಕರೆನ್ಸಿ ಮುದ್ರಣಕ್ಕಾಗಿ ವೆಚ್ಚವು ಕೇಂದ್ರಕ್ಕೆ ಹಣ ವರ್ಗಾವಣೆಯಲ್ಲಿ ಕಡಿತಕ್ಕೆ ಕಾರಣವಾಗಿತ್ತು ಮತ್ತು ಇದು 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಹೆಚ್ಚುವರಿ ನಿಧಿ ವರ್ಗಾವಣೆಗಾಗಿ ಸರಕಾರದ ಬೇಡಿಕೆಯನ್ನು ತೀವ್ರಗೊಳಿಸಿತ್ತು ಎಂದು ಹೇಳಿರುವ ಆಚಾರ್ಯ, ಇದು ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ಆರ್‌ಬಿಐನಿಂದ ಹಣಗಳಿಕೆಯನ್ನು ಖಚಿತಪಡಿಸಿಕೊಳ್ಳಲು ಹಿಂಬಾಗಿಲ ಪ್ರಯತ್ನವಾಗಿತ್ತು ಎಂದು ಬಣ್ಣಿಸಿದ್ದಾರೆ.

ಹೂಡಿಕೆ ಹಿಂದೆಗೆತದಿಂದ ಸಾಕಷ್ಟು ಆದಾಯವನ್ನು ಸೃಷ್ಟಿಸುವಲ್ಲಿ ಸರಕಾರದ ಅಸಾಮರ್ಥ್ಯವು ಆರ್‌ಬಿಐ ಮೇಲೆ ಒತ್ತಡ ಹೇರಲು ಇನ್ನೊಂದು ಕಾರಣವಾಗಿತ್ತು ಎಂದು ಬೊಟ್ಟು ಮಾಡಿರುವ ಆಚಾರ್ಯ, ಆರ್‌ಬಿಐನಿಂದ ವರ್ಗಾವಣೆಗಳ ಮೂಲಕ ಹೂಡಿಕೆ ಹಿಂದೆಗೆತ ಆದಾಯದಲ್ಲಿನ ಕೊರತೆಯನ್ನು ತುಂಬಿಕೊಳ್ಳುವುದು ವಾರ್ಷಿಕ ಸಂಪ್ರದಾಯವಾಗಿಬಿಟ್ಟಿದೆ ಎಂದಿದ್ದಾರೆ.

ವಿನಂತಿಸಿಕೊಳ್ಳಲಾಗಿದ್ದ ವರ್ಗಾವಣೆಗಳಿಗೆ ಆರ್‌ಬಿಐ ಒಪ್ಪದಿದ್ದಾಗ ಸರಕಾರದೊಳಗಿನ ಪ್ರಸ್ತಾವವೊಂದು ಆರ್‌ಬಿಐ ಕಾಯ್ದೆಯ ಕಲಂ 7ನ್ನು ಬಳಸುವಂತೆ ಸೂಚಿಸಿತ್ತು ಎಂದೂ ಆಚಾರ್ಯ ತನ್ನ ಮುನ್ನುಡಿಯಲ್ಲಿ ಹೇಳಿದ್ದಾರೆ. ಈ ಕಲಂ ಸಾರ್ವಜನಿಕ ಹಿತಾಸಕ್ತಿಯಲ್ಲಿ ಅಗತ್ಯವೆನಿಸಿದರೆ ಆರ್‌ಬಿಐ ಗವರ್ನರ್ ಜೊತೆ ಸಮಾಲೋಚಿಸಿ ಬ್ಯಾಂಕಿಗೆ ನಿರ್ದೇಶನಗಳನ್ನು ಹೊರಡಿಸುವುದನ್ನು ಸರಕಾರಕ್ಕೆ ಸಾಧ್ಯವಾಗಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News