×
Ad

ನೆಹರು ದಾಖಲೆಗಳು ನಾಪತ್ತೆಯಾಗಿಲ್ಲ, ಸೋನಿಯಾರಿಗೆ ಕಳುಹಿಸಿದ್ದ ಖಾಸಗಿ ಪತ್ರಗಳನ್ನು ಪತ್ತೆ ಹಚ್ಚಲಾಗುತ್ತಿಲ್ಲ: ಕೇಂದ್ರ

Update: 2025-12-17 22:10 IST

ನೆಹರು , ಸೋನಿಯಾ ಗಾಂಧಿ | Photo Credit : PTI 

ಹೊಸದಿಲ್ಲಿ,ಡಿ.17: ನೆಹರು ಅವರಿಗೆ ಸಂಬಂಧಿಸಿದ ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು 2008ರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರಿಗೆ ಕಳುಹಿಸಲಾಗಿತ್ತು ಮತ್ತು ಆಗಿನಿಂದ ಅವುಗಳನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಸಂಸ್ಕೃತಿ ಸಚಿವಾಲಯವು ಬುಧವಾರ ಸ್ಪಷ್ಟಪಡಿಸಿದೆ.  

ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ (ಪಿಎಂಎಂಎಲ್) ಸದಸ್ಯ ರಿಜ್ವಾನ್ ಕಾದ್ರಿ ಅವರು ಸೆಪ್ಟಂಬರ್‌ನ ಲ್ಲಿ ಸೋನಿಯಾರಿಗೆ ಪತ್ರ ಬರೆದು,ಅವರ ವಶದಲ್ಲಿರುವ ನೆಹರು ದಾಖಲೆಗಳನ್ನು ಮರಳಿಸುವಂತೆ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ,ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರು ಅವರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ ಎಂದು ಕೆಲವು ದಿನಗಳ ಹಿಂದೆ ಸಚಿವಾಲಯವು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿತ್ತು.

ಸಚಿವಾಲಯದ ಹೇಳಿಕೆಯ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಅವರು ಸರಕಾರವು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಬುಧವಾರದ ಸ್ಪಷ್ಟೀಕರಣ ಹೊರಬಿದ್ದಿದೆ.

ನೆಹರು ಅವರ ಎಲ್ಲ ಖಾಸಗಿ ಕುಟುಂಬ ಪತ್ರಗಳು ಮತ್ತು ಟಿಪ್ಪಣಿಗಳನ್ನು ಮರಳಿ ಪಡೆಯಲು ಬಯಸಿದ್ದಾರೆ ಎಂದು ಅವರ ಪ್ರತಿನಿಧಿ ಎಂ.ವಿ.ರಾಜನ್ 29,ಎಪ್ರಿಲ್ 2008ರಂದು ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು. ಅದರಂತೆ ನೆಹರು ದಾಖಲೆಗಳಿದ್ದ 51 ಪೆಟ್ಟಿಗೆಗಳನ್ನು ಸೋನಿಯಾರಿಗೆ ಕಳುಹಿಸಲಾಗಿತ್ತು. ಹೀಗಾಗಿ ಅವು ಎಲ್ಲಿವೆ ಎನ್ನುವುದು ತಿಳಿದಿರುವುದರಿಂದ ಪಿಎಂಎಂಎಲ್‌ ನಿಂದ ನೆಹರುಗೆ ಸಂಬಂಧಿಸಿದ ಯಾವುದೇ ದಾಖಲೆಯು ನಾಪತ್ತೆಯಾಗಿಲ್ಲ ಎಂದು ಸಚಿವಾಲಯವು ಬುಧವಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಪಿಎಂಎಂಎಲ್‌ನಿಂದ ಬರೆಯಲಾಗಿದ್ದ ಪತ್ರಗಳು ಸೇರಿದಂತೆ ಈ ಎಲ್ಲ ದಾಖಲೆಗಳನ್ನು ಮರಳಿಸುವಂತೆ ತಾನು ಸೋನಿಯಾರ ಕಚೇರಿಯೊಂದಿಗೆ ನಿರಂತರ ಪತ್ರ ವ್ಯವಹಾರವನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿರುವ ಸಚಿವಾಲಯವು,ಭಾರತದ ಮೊದಲ ಪ್ರಧಾನಿಗೆ ಸಂಬಂಧಿಸಿದ ದಾಖಲೆಗಳು ದೇಶದ ಪರಂಪರೆಯ ಭಾಗವಾಗಿದ್ದು, ಖಾಸಗಿ ಆಸ್ತಿಯಲ್ಲ. ಅವು ಪಿಎಂಎಂಎಲ್ ಬಳಿ ಇರುವುದು ಮತ್ತು ಸಂಶೋಧನೆಗಾಗಿ ನಾಗರಿಕರು ಮತ್ತು ವಿದ್ವಾಂಸರು ಅವುಗಳಿಗೆ ಪ್ರವೇಶ ಹೊಂದಿರುವುದು ಅಗತ್ಯವಾಗಿದೆ ಎಂದೂ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News