×
Ad

ʼಅನಕ್ಷರಸ್ಥರು ನಮ್ಮನ್ನಾಳುತ್ತಿದ್ದಾರೆʼ ಎಂದ ನಟಿ ಕಾಜೋಲ್‌ ವಿರುದ್ಧ ಬಲಪಂಥೀಯ ಟ್ರೋಲ್‌ಗಳ ದಾಳಿ

ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ, ಬಲಪಂಥೀಯರು ಕಾಜೋಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಜೊಲ್‌ ಅರ್ಧದಲ್ಲೇ ಶಾಲೆ ತೊರೆದಿದ್ದು, ಆಕೆಯ ಪತಿ ಅರ್ಧದಲ್ಲೇ ಕಾಲೇಜು ಬಿಟ್ಟವರು ಎಂದೆಲ್ಲಾ ಬಲಪಂಥೀಯ ಟ್ರೋಲ್‌ ಪಡೆ ಕಾಜೊಲ್‌ ವಿರುದ್ಧ ಮುಗಿಬಿದ್ದಿವೆ.

Update: 2023-07-08 20:01 IST

Photo: PTI

ಹೊಸದಿಲ್ಲಿ: ಶಿಕ್ಷಣದ ಹಿನ್ನೆಲೆಯಿಲ್ಲದ ರಾಜಕಾರಣಿಗಳು ನಮ್ಮನ್ನಾಳುತ್ತಿದ್ದಾರೆ ಎಂದು ಹೇಳಿಕ ನೀಡಿದ್ದಕ್ಕಾಗಿ ಬಾಲಿವುಡ್‌ ನಟಿ ಕಾಜೋಲ್‌ ವಿರುದ್ಧ ಬಲಪಂಥೀಯ ಟ್ರೋಲ್‌ ಗಳು ಆನ್‌ಲೈನ್‌ ದಾಳಿ ನಡೆಸಿರುವ ಬೆಳವಣಿಗೆ ನಡೆದಿದೆ.

ತಮ್ಮ ಮುಂದಿನ ಚಿತ್ರ ʼದ ಟ್ರಯಲ್‌ʼಗೆ ಸಂಬಂಧಿಸಿ ದ ಕ್ವಿಂಟ್‌ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಕಾಜೋಲ್‌, "ನಮ್ಮ ದೇಶದಲ್ಲಿ ಬದಲಾವಣೆಯು ನಿಧಾನಗತಿಯಲ್ಲಾಗುತ್ತಿದೆ. ಯಾಕೆಂದರೆ ನಮ್ಮ ಆಲೋಚನೆಗಳಲ್ಲಿ ಹಿಂದೆ ಉಳಿದಿದ್ದೇವೆ. ಶಿಕ್ಷಣವೂ ಇದಕ್ಕೆ ಕಾರಣವಾಗಿದೆ. ಶೈಕ್ಷಣಿಕ ಹಿನ್ನೆಲೆಯೇ ಇಲ್ಲದ ರಾಜಕೀಯ ನಾಯಕರು ನಮ್ಮ ದೇಶದಲ್ಲಿದ್ದಾರೆ. ದೃಷ್ಟಿಕೋನವೇ ಇಲ್ಲದ ಹಲವು ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ. ಶಿಕ್ಷಣವು ಕನಿಷ್ಠ ಪಕ್ಷ ಇಂತಹ ದೃಷ್ಟಿಕೋನಗಳತ್ತ ನಿಮ್ಮನ್ನು ತೆರೆದಿಡುತ್ತದೆ ಎಂದು ಹೇಳಿದ್ದರು.

ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ, ಬಲಪಂಥೀಯರು ಕಾಜೋಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಜೊಲ್‌ ಅರ್ಧದಲ್ಲೇ ಶಾಲೆ ತೊರೆದಿದ್ದು, ಆಕೆಯ ಪತಿ ಅರ್ಧದಲ್ಲೇ ಕಾಲೇಜು ಬಿಟ್ಟವರು ಎಂದೆಲ್ಲಾ ಬಲಪಂಥೀಯ ಟ್ರೋಲ್‌ ಪಡೆ ಕಾಜೊಲ್‌ ವಿರುದ್ಧ ಮುಗಿಬಿದ್ದಿವೆ. ಆದರೆ ವಿಚಿತ್ರ ಎಂದರೆ ತನ್ನ ಹೇಳಿಕೆಯಲ್ಲಿ ಎಲ್ಲೂ ಕೂಡ ಕಾಜೋಲ್‌ ಯಾವುದೇ ನಾಯಕನ ಹೆಸರನ್ನು ಹೇಳಿರಲಿಲ್ಲ.

ಇದನ್ನು ಬೆಟ್ಟು ಮಾಡಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ, "ಮೋದಿಯವರ ಟ್ರೋಲ್‌ ಪಡೆ ಕಾಜೋಲ್‌ ವಿರುದ್ಧದ ದಾಳಿಯಲ್ಲಿ ಬ್ಯುಸಿಯಾಗಿದೆ. ಮೋದಿಯೊಬ್ಬರೇ ಅನಕ್ಷರಸ್ಥ ಎಂದು ಅವರೇಕೆ ಭಾವಿಸುತ್ತಾರೆ?, ಆಕೆ ಮೋದಿ ಹೆಸರು ಹೇಳಿರಲಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನರುಂದರ್‌ ಎಂಬವರು, "ಯಾವುದೇ ಗುರಿಯಿಲ್ಲದ ಅನಕ್ಷರಸ್ಥ ನಾಯಕರು ನಮ್ಮನ್ನು ಆಳುತ್ತಿದ್ದಾರೆ ಎಂದು ಕಾಜೋಲ್‌ ಯಾರದೇ ಹೆಸರೆತ್ತದೆ ಹೇಳಿದ್ದರು. ಭಕ್ತರು ಈಗ ಕಾಜೊಲ್‌ ರನ್ನು ಗುರಿ ಮಾಡುತ್ತಿದ್ದಾರೆ. ಮೋದಿ ಜಿ ಬಗ್ಗೆ (ಅವರಿಗೆ) ವಿಶ್ವಾಸವಿದೆʼʼ ಎಂದಿದ್ದಾರೆ.

ಈ ನಿರಂತರ ಟ್ರೋಲ್‌ ದಾಳಿಯ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಜೊಲ್‌, ʼʼನಾನು ಶಿಕ್ಷಣ ಮತ್ತು ಅದರ ಮಹತ್ವದ ಬಗ್ಗೆ ಹೇಳಿದ್ದೆ. ಯಾವುದೇ ರಾಜಕೀಯ ನಾಯಕರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಶ್ರೇಷ್ಟ ನಾಯಕರೂ ದೇಶದಲ್ಲಿದ್ದಾರೆʼʼ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News