ರೋಜಗಾರ್ ಮೇಳ : 51,000 ಸರಕಾರಿ ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರೋಜಗಾರ್ ಮೇಳದಡಿ ಸರಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ 51,000 ನೇಮಕಾತಿ ಪತ್ರಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿತರಿಸಿದರು. ಇವುಗಳಲ್ಲಿ ಹೆಚ್ಚಿನ ನೇಮಕಾತಿಗಳು ಭದ್ರತಾ ಪಡೆಗಳಿಗೆ ಸೇರಿದ್ದಾಗಿದೆ.
ಹೊಸದಾಗಿ ನೇಮಕಗೊಂಡವರನ್ನು ‘ಅಮೃತ ರಕ್ಷಕರು’ ಎಂದು ಬಣ್ಣಿಸಿದ ಮೋದಿ, ಯುವಜನರಿಗೆ ಹೊಸ ಮಾರ್ಗಗಳನ್ನು ತೆರೆಯಲು ಅರೆ ಸೇನಾಪಡೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಭಾರತದ ಆರ್ಥಿಕತೆಯು ಕ್ಷಿಪ್ರ ಬೆಳವಣಿಗೆಯ ಪಥದಲ್ಲಿದೆ ಮತ್ತು ಯುವಜನರಿಗೆ ಬೃಹತ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಹೇಳಿದ ಮೋದಿ, ‘ಈ ದಶಕದಲ್ಲಿ ಭಾರತವು ವಿಶ್ವದ ಮೂರು ಅಗ್ರ ಆರ್ಥಿಕತೆಗಳಲ್ಲಿ ಒಂದಾಗಲಿದೆ. ನಾನು ಈ ಖಾತರಿಯನ್ನು ನೀಡಿದಾಗ ಅದನ್ನು ಸಂಪೂರ್ಣ ಹೊಣೆಗಾರಿಕೆಯಿಂದ ಮಾಡುತ್ತೇನೆ’ ಎಂದು ಹೇಳಿದರು.
ಆಟೊಮೊಬೈಲ್, ಔಷಧಿ, ಪ್ರವಾಸೋದ್ಯಮ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳು ತ್ವರಿತ ಗತಿಯಲ್ಲಿ ಬೆಳೆಯುವ ನಿರೀಕ್ಷೆಯಿದ್ದು, ಯುವಜನರಿಗೆ ಉದ್ಯೋಗಾವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ ಎಂದ ಅವರು, ಪ್ರವಾಸೋದ್ಯಮ ಕೇತ್ರವೊಂದರಿಂದಲೇ 2030ರ ವೇಳೆಗೆ ಆರ್ಥಿಕತೆಗೆ 20 ಲ.ಕೋ.ರೂ.ಗಳ ಕೊಡುಗೆಯನ್ನು ನಿರೀಕ್ಷಿಸಲಾಗಿದೆ ಮತ್ತು ಅದು 13-14 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಆಹಾರದಿಂದ ಔಷಧಿಗಳವರೆಗೆ,ಬಾಹ್ಯಾಕಾಶದಿಂದ ಸ್ಟಾರ್ಟ್‌ಅಪ್‌ಗಳವರೆಗೆ ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿಗೊಳ್ಳಬೇಕಿದೆ. ಪ್ರತಿಯೊಂದೂ ಕ್ಷೇತ್ರವು ಪ್ರಗತಿಯಾದಾಗ ಆರ್ಥಿಕತೆಯು ಬೆಳೆಯುತ್ತದೆ ಎಂದು ಅವರು ಹೇಳಿದರು.
ಔಷಧಿ ಉದ್ಯಮದ ಉದಾಹರಣೆಯನ್ನು ನೀಡಿದ ಮೋದಿ, ಪ್ರಸ್ತುತ ನಾಲ್ಕು ಲಕ್ಷ ಕೋಟಿ ರೂ. ಮೌಲ್ಯದ ಈ ಕ್ಷೇತ್ರವು 2030ರ ವೇಳೆಗೆ 10 ಲಕ್ಷ ಕೋಟಿ ರೂ. ಗಳಿಗೆ ಬೆಳೆಯುವ ನಿರೀಕ್ಷೆಯಿದೆ. ಈ ದಶಕದಲ್ಲಿ ಔಷಧಿ ಉದ್ಯಮಕ್ಕೆ ಬಹಳಷ್ಟು ಯುವಜನರ ಅಗತ್ಯವಿದೆ. ಬಹಳಷ್ಟು ಉದ್ಯೋಗಾವಕಾಶಗಳು ದೊರೆಯಲಿವೆ. ಜೊತೆಗೆ
ಆಟೊಮೊಬೈಲ್ ಕ್ಷೇತ್ರವೂ ಬೆಳವಣಿಗೆಯ ಪಥದಲ್ಲಿದೆ ಮತ್ತು ಅದನ್ನು ಮುನ್ನಡೆಸಲು ಯುವಶಕ್ತಿಯ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಅಗಾಧ ಉದ್ಯೋಗಾವಕಾಶಗಳು ಇರಲಿವೆ ಎಂದರು.
ಉತ್ತರ ಪ್ರದೇಶದ ನಿದರ್ಶನವನ್ನು ನೀಡಿದ ಪ್ರಧಾನಿ, ರಾಜ್ಯ ಸರಕಾರದ ಉತ್ತಮ ಆಡಳಿತವು ಕಾನೂನಿನ ಸುವ್ಯವಸ್ಥೆಗೆ ಕಾರಣವಾಗಿದೆ. ಇದು ರಾಜ್ಯಕ್ಕೆ ಬಹಳಷ್ಟು ಹೂಡಿಕೆಗಳನ್ನು ತಂದಿದೆ. ಭದ್ರತೆಯ ವಾತಾವರಣ ಅಭಿವೃದ್ಧಿಯನ್ನು ತ್ವರಿತಗೊಳಿಸುತ್ತದೆ. ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಮತ್ತು ಹೂಡಿಕೆಗಳನ್ನು ಆಕರ್ಷಿಸುತ್ತದೆ. ಅಪರಾಧ ಪ್ರಮಾಣ ಹೆಚ್ಚು ಹೊಂದಿರುವ ರಾಜ್ಯಗಳು ಕಡಿಮೆ ಹೂಡಿಕೆಗಳನ್ನು ಪಡೆಯುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಕುಗ್ಗಿಸುತ್ತವೆ ಎಂದರು.
‘9 ವರ್ಷಗಳ ಹಿಂದೆ ಈ ದಿನದಂದು ನಾವು ಜನಧನ ಯೋಜನೆಯನ್ನು ಆರಂಭಿಸಿದ್ದೆವು. ಹಣಕಾಸು ಲಾಭಗಳ ಜೊತೆಗೆ ಯೋಜನೆಯು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದೆ ’ ಎಂದು ಮೋದಿ ಹೇಳಿದರು.