60 ಕೋಟಿ ರೂ. ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಪ್ರಕರಣ ದಾಖಲು
PC: x.com/Afternoon_Voice
ಮುಂಬೈ: ಸಾಲ ಮತ್ತು ಹೂಡಿಕೆ ಒಪ್ಪಂದದ ಅಡಿಯಲ್ಲಿ ಮುಂಬೈ ಮೂಲದ ಉದ್ಯಮಿಯೊಬ್ಬರಿಗೆ 60.4 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ ಪ್ರಕರಣ ದಾಖಲಿಸಲಾಗಿದೆ. ಇದೀಗ ನಿಷ್ಕ್ರಿಯವಾಗಿರುವ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಕೂಡಾ ಪ್ರಕರಣದಲ್ಲಿ ಸೇರಿದೆ.
ಭಾರತೀಯ ದಂಡಸಂಹಿತೆಗಳ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ಸೆಕ್ಷನ್ ಗಳ ಅಡಿಯಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ವಂಚನೆ ಪ್ರಕರಣ 10 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ್ದಾಗಿರುವುದರಿಂದ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ.
ದೀಪಕ್ ಕೊಠಾರಿ (60) ಎಂಬುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ ಬಳಿಕ ಆರ್ಥಿಕ ಅಪರಾಧಗಳ ವಿಭಾಗ ಪ್ರಾಥಮಿಕ ತನಿಖೆ ನಡಸಿದೆ. ದೀಪಕ್ ಕೊಠಾರಿ ಜುಹು ನಿವಾಸಿಯಾಗಿದ್ದು, ಲೋಟಸ್ ಕ್ಯಾಪಿಟಲ್ ಫೈನಾನ್ಸಸ್ ಎಂಬ ಬ್ಯಾಂಕೇತರ ಹಣಕಾಸು ಸಂಸ್ಥೆಯ ನಿರ್ದೇಶಕರು.
ರಾಜೇಶ್ ಆರ್ಯಾ ಎಂಬವರು ಹೋಮ್ ಶಾಪಿಂಗ್ ಮತ್ತು ಆನ್ಲೈನ್ ರಿಟೇಲ್ ಪ್ಲಾಟ್ ಫಾರಂ ಸಂಸ್ಥೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ನ ನಿದೇರ್ಶಕರಾಗಿದ್ದ ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯವರನ್ನು ತಮಗೆ ಪರಿಚಯಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಕಂಪನಿಯ ಒಟ್ಟು ಷೇರುಗಳ ಪೈಕಿ ಈ ದಂಪತಿ ಶೇಕಡ 87.6ರಷ್ಟು ಷೇರುಗಳನ್ನು ಹೊಂದಿದ್ದರು.
ಆರೋಪಿಗಳು ಶೇಕಡ 12ರ ಬಡ್ಡಿದರಲ್ಲಿ 75 ಕೋಟಿ ರೂಪಾಯಿ ಸಾಲ ಕೇಳಿದ್ದು, ಬಳಿಕ ಅಧಿಕ ತೆರಿಗೆಯನ್ನು ತಪ್ಪಿಸುವ ಸಲುವಾಗಿ ಮಾಸಿಕ ಪ್ರತಿಫಲ ಮತ್ತು ಮೂಲಧನದ ಮರುಪಾವತಿ ಒಳಗೊಂಡ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾಗಿ ಆಪಾದಿಸಲಾಗಿದೆ.