ಭಾರತಕ್ಕೆ ಆಗಮಿಸಿದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್
ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ ಪ್ರಧಾನಿ ಮೋದಿ
Photo credit: X/ANI
ಹೊಸದಿಲ್ಲಿ: ಭಾರತ-ರಶ್ಯ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು (ಗುರುವಾರ) ಸಂಜೆ ದಿಲ್ಲಿಗೆ ಆಗಮಿಸಿದರು.
ಇಲ್ಲಿನ ಪಾಲಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಲಾದಿಮಿರ್ ಪುಟಿನ್‌ರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಈ ವೇಳೆ ಉಭಯ ದೇಶಗಳ ರಾಜತಾಂತ್ರಿಕರು ಉಪಸ್ಥಿತರಿದ್ದರು.
ಭಾರತಕ್ಕೆ ಆಗಮಿಸಿರುವ ಪುಟಿನ್‌ರ ನಿಯೋಗದಲ್ಲಿ ರಕ್ಷಣಾ ಸಚಿವ ಆ್ಯಂಡ್ರೆ ಬೆಲೊಸೊವ್ ಸೇರಿದಂತೆ ರಶ್ಯ ಅಧಿಕಾರಿಗಳಿದ್ದಾರೆ.
ಇಂದು ರಾತ್ರಿ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಆಯೋಜಿಸಲಾಗಿರುವ ಭೋಜನ ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳಲಿದ್ದಾರೆ. ಬಳಿಕ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಶ್ಯದ ರಕ್ಷಣಾ ಸಚಿವ ಆ್ಯಂಡ್ರೆ ಬೆಲೊಸೊವ್ ಅವರು ಗುರುವಾರ ರಾತ್ರಿ ಮಾತುಕತೆ ನಡೆಸಲಿದ್ದಾರೆ.
ಈ ಮಾತುಕತೆಯ ವೇಳೆ ಉಭಯ ನಾಯಕರು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಖರೀದಿ, ಸುಖೋಯ್-30 ಎಂಕೆಐ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ರಶ್ಯದಿಂದ ಇತರ ಸೇನಾ ಸಾಮಗ್ರಿಗಳನ್ನು ಖರೀದಿಸುವುದರಲ್ಲಿ ಭಾರತಕ್ಕಿರುವ ಆಸಕ್ತಿಯ ಕುರಿತು ಚರ್ಚಿಸಲಿದ್ದಾರೆ.
ಇದೇ ವೇಳೆ ನಾಗರಿಕ ಅಣು ಶಕ್ತಿ ಕ್ಷೇತ್ರದಲ್ಲಿ ಭಾರತದ ಜೊತೆಗಿನ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ಒಡಂಬಡಿಕೆಗೆ (MOU) ಉಭಯ ದೇಶಗಳು ಸಹಿ ಹಾಕುವ ನಿರೀಕ್ಷೆ ಇದೆ.