×
Ad

ದುಬಾರಿ ಬೆಲೆಗೆ ಕಲ್ಲಿದ್ದಲು ಮಾರಾಟ: ಲಾಭದ ಹಣ ವಿದೇಶಕ್ಕೆ ವರ್ಗಾವಣೆ; ಕಾಂಗ್ರೆಸ್ ಆರೋಪ

Update: 2023-10-14 22:06 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಆಧುನಿಕ ಭಾರತ ಕಂಡಂತಹ ಅತಿ ದೊಡ್ಡ ಕಲ್ಲಿದ್ದಲು ಹಗರಣದ ಹಿಂದೆ  ಆದಾನಿ ಉದ್ಯಮ ಸಮೂಹ ಇದೆಯೆಂದು ಕಾಂಗ್ರೆಸ್ ಶನಿವಾರ ಆಪಾದಿಸಿದೆ. ಕಳೆದ ಎರಡು ವರ್ಷಗಳಲ್ಲಿ  ಕಲ್ಲಿದ್ದಲು ಮಾರಾಟದಿಂದ ಬಂದ ಲಾಭಾಂಶದಲ್ಲಿ  12 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ದೇಶದಿಂದ ಹೊರಗೆ ವರ್ಗಾಯಿಸಲಾಗಿದೆ ಎಂಬುದನ್ನು  ಹೊಸದಾಗಿ ಪ್ರಕಟವಾದ ಪತ್ರಿಕಾ ವರದಿಯೊಂದು ಬಹಿರಂಗಪಡಿಸಿರುವುದಾಗಿ ಅದು ಹೇಳಿದೆ. 

2019 ಹಾಗೂ 2021ರ ನಡುವೆ   ಆದಾನಿ ಕಂಪೆನಿಯು 31 ಲಕ್ಷ ಟನ್  ಕಲ್ಲಿದ್ದಲು ಸಾಗಾಟಗಳನ್ನು ನಡೆಸಿದೆ. ಕಲ್ಲಿದ್ದಲು ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಿದ್ದರೂ, ಆದಾನಿ ಸಮೂಹವು ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ, ಮೂಲಕ ಅದರಲ್ಲಿ ಶೇ.52ರಷ್ಟು ಲಾಭ ಮಾಡಿಕೊಂಡಿದೆ ಎಂದು ಅದು ಹೇಳಿದೆ ಎಂಬುದನ್ನು ಫೈನಾನ್ಶಿಯಲ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿಯು ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

‘‘ಆದಾನಿ ಕಂಪೆನಿಯು ಕೋಟ್ಯಂತರ ಭಾರತೀಯರ ಜೇಬಿನ ಹಣ ಕದ್ದಿದೆಯೆಂಬುದು ಉತ್ಪ್ರೇಕ್ಷೆಯ ಮಾತಲ್ಲ, ಅಕ್ಷರಶಃ ಸತ್ಯ’’ಎಂದು ಅವರು ಹೇಳಿದರು.

ಆಸ್ತಿಗಳನ್ನು ಸಂಪಾದಿಸಲು ಆದಾನಿ ಗ್ರೂಪ್ ಗೆ ಬಿಜೆಪಿ ಸರಕಾರವು ನೆರವಾಗುತ್ತಿದೆ. ಇದರಿಂದಾಗಿ ಬಿಜೆಪಿಗೆ ಚುನಾವಣಾ ಬಾಂಡ್ ಗಳ ಪ್ರವಾಹವೇ ಹರಿದುಬರುತ್ತಿದ್ದು, ಅದಕ್ಕೆ ಇಷ್ಟಬಂದಂತೆ ಶಾಸಕರನ್ನು ಖರೀದಿಸಲು ಹಾಗೂ ಪ್ರತಿಪಕ್ಷಗಳನ್ನು  ಒಡೆಯಲು ಸಾಧ್ಯವಾಗುತ್ತಿದೆ ಎಂದು ಜೈರಾಮ್ ರಮೇಶ್ ಆಪಾದಿಸಿದ್ದಾರೆ.

ಇದು ಭಾರತದ ಅತಿ ದೊಡ್ಡ ಹಗರಣವಾಗಿದೆ. ಭಾರತದ ಜನತೆಯ ಬಗ್ಗೆ ಇರುವ ಘೋರ ತಿರಸ್ಕಾರದ ಜೊತೆ ದುರಾಸೆ ಹಾಗೂ ಹೃದಯ ಹೀನತೆಯನ್ನು ಅದು ಹೊಂದಿದೆ ಎಂದು ಹೇಳಿಕೆಯು ತಿಳಿಸಿದೆ.

‘‘ನಿಭಾಯಿಸಲು ಸಾಧ್ಯವಾಗದ ಹಗರಣವೇ ಇಲ್ಲ ಹಾಗೂ  ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಾಗದ ಯಾವುದೇ ವಿಷಯವಿಲ್ಲ  ಎಂಬ ಭಾವನೆಯೊಂದಿಗೆ ಈ ಹಗರಣವನ್ನು ನಡೆಸಲಾಗಿದೆ. ಭಾರತವನ್ನು ವಶಪಡಿಸಿಕೊಳ್ಳಲು ಮೊದಾನಿಗೆ ಸಾಧ್ಯವಾಗದು. 2024ರಲ್ಲಿ ಭಾರತದ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ’’ ಎಂದು ರಮೇಶ್ ತಿಳಿಸಿದ್ದಾರೆ.

ಆದರೆ ಫೈನಾನ್ಶಿಯಲ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿಯನ್ನು ಆದಾನಿ ಗ್ರೂಪ್ ಖಂಡಿಸಿದೆ.ಸಾರ್ವಜನಿಕವಾಗಿ ಲಭ್ಯವಿರುವ ವಾಸ್ತವಾಂಶಗಳು ಹಾಗೂ ಮಾಹಿತಿಯನ್ನು ವರದಿಯಲ್ಲಿ ತಿರುಚಲಾಗಿದೆ ಎಂದು ಅದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News