×
Ad

ಸೌದಿ ಅರೇಬಿಯಾ: ಪೊಲೀಸರು, ಸುಲಿಗೆ ಗ್ಯಾಂಗ್ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯ ಯುವಕ ಮೃತ್ಯು

Update: 2025-11-01 07:30 IST

PC: x.com/ndtvfeed

ರಾಂಚಿ: ಸೌದಿ ಅರೇಬಿಯಾದ ಜಿದ್ದಾದಲ್ಲಿ ಅ.16ರಂದು ಪೊಲೀಸರು ಹಾಗೂ ಸುಲಿಗೆ ಗ್ಯಾಂಗ್ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಜಾರ್ಖಂಡ್ ಮೂಲದ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತ ಯುವಕನನ್ನು ವಿಜಯ್ ಕುಮಾರ್ ಮಹತೊ (26) ಎಂದು ಗುರುತಿಸಲಾಗಿದ್ದು, ಈತ ಗಿರಿಧ್ ಜಿಲ್ಲೆಯ ದುಮ್ರಿ ತಾಲೂಕಿನ ಮಧ್ ಗೋಪಾಲಿ ಪಂಚಾಯ್ತಿ ವ್ಯಾಪ್ರಿಯ ಧೂದ್ ಪಾನಿಯಾ ಗ್ರಾಮದವನು. ಟವರ್ಲೈನ್ ಫಿಟ್ಟರ್ ಆಗಿ ಕಳೆದ ಒಂಬತ್ತು ತಿಂಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಸಿಕಂದರ್ ಅಲಿ ಹೇಳಿದ್ದಾರೆ.

ಯುವಕನ ಮೃತದೇಹವನ್ನು ಭಾರತಕ್ಕೆ ಮರಳಿಸಲು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಜಾರ್ಖಂಡ್ ಕಾರ್ಮಿಕ ಇಲಾಖೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದೆ.

ಗಿರಿಧ್ ಜಿಲ್ಲೆಯ ದುಮ್ರಿ ತಾಲೂಕಿನ ಯುವಕ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆತನ ದೇಹವನ್ನು ಭಾರತಕ್ಕೆ ಮರಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆಯ ವಲಸೆ ನಿಯಂತ್ರಣ ಕೋಶದ ಮುಖ್ಯಸ್ಥ ಶಿಖರ ಲಾಕ್ರಾ ಹೇಳಿದ್ದಾರೆ.

"ಯುವಕನ ಹುಟ್ಟೂರಿಗೆ ಮೃತದೇಹ ತರಲು ವಿಧಿವಿಧಾನಗಳನ್ನು ಪೂರೈಸುವ ಸಂಬಂಧ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾ ಪೊಲೀಸ್ ಅಧಿಕಾರಿಗಳ ಜತೆ ನಾವು ಸಂಪರ್ಕದಲ್ಲಿದ್ದೇವೆ" ಎಂದು ಅವರು ವಿವರಿಸಿದ್ದಾರೆ.

"ಅ.16ರಂದು ತನ್ನ ಪತ್ನಿ ಬಸಂತಿದೇವಿಗೆ ಧ್ವನಿ ಸಂದೇಶ ಕಳುಹಿಸಿರುವ ಯುವಕ, ಗುಂಡಿನ ಚಕಮಕಿ ವೇಳೆ ಸಿಕ್ಕಿಹಾಕಿಕೊಂಡು ತೀವ್ರ ಗಾಯಗಳಾಗಿರುವುದಾಗಿ ಹೇಳಿದ್ದ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ಭಾವಿಸಿದ್ದರು. ಆತ ಶೂಟೌಟ್ ನಲ್ಲಿ ಮೃತಪಟ್ಟಿದ್ದಾಗಿ ಅ.24ರಂದು ಮಾಹಿತಿ ಬಂದಿದೆ" ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News