ಈಡಿ ಎಲ್ಲಾ ಮಿತಿಗಳನ್ನು ಮೀರಿದೆ: ಕೇಂದ್ರ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ತರಾಟೆ
Photo credit: PTI
ಹೊಸದಿಲ್ಲಿ : ತಮಿಳುನಾಡು ಸರಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿ ಸಂಸ್ಥೆ TASMAC ಮೇಲಿನ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ. ಜಾರಿ ನಿರ್ದೇಶನಾಲಯ (ED) ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಟೀಕಿಸಿದೆ.
ಈಡಿ ದಾಳಿಗಳನ್ನು ಪ್ರಶ್ನಿಸಿ ತಮಿಳುನಾಡು ಸರಕಾರ ಮತ್ತು ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (TASMAC) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಜೆಐ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಈಡಿಗೆ ನೋಟಿಸ್ ನೀಡಿದೆ.
ಸರಕಾರಿ ಸ್ವಾಮ್ಯದ ಸಂಸ್ಥೆಯ ಮೇಲೆ ಈಡಿಯ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ನಿಮ್ಮ ಜಾರಿ ನಿರ್ದೇಶನಾಲಯವು ಎಲ್ಲಾ ಮಿತಿಗಳನ್ನು ಮೀರುತ್ತಿದೆ. ಈ ಅಪರಾಧವು ನಿಗಮದ ವಿರುದ್ಧ ಹೇಗೆ ಆಗುತ್ತದೆ? ನೀವು ದೇಶದ ಒಕ್ಕೂಟ ರಚನೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದೀರಿ ಎಂದು ಸಿಜೆಐ ಗವಾಯಿ ಟೀಕಿಸಿದರು.
TASMAC ಪ್ರಧಾನ ಕಚೇರಿ ಸೇರಿದಂತೆ ಇತರ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ TASMAC ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.