×
Ad

ವಿಶ್ವಕಪ್ ನಲ್ಲಿ ಭಾರತದ ಸೋಲನ್ನು ಸಂಭ್ರಮಿಸಿದ ಆರೋಪ: ಯುಎಪಿಎ ಅಡಿ ಏಳು ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ

Update: 2023-11-27 17:10 IST

ಸಾಂದರ್ಭಿಕ ಚಿತ್ರ 

ಜಮ್ಮು: ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ತಂಡ ಸೋತ ಕುರಿತಂತೆ ಜಮ್ಮು ಕಾಶ್ಮೀರದ ಗಂದೇರ್ಬಲ್‌ ಎಂಬಲ್ಲಿರುವ ಶೇರ್-ಎ-ಕಾಶ್ಮೀರ್‌ ಯುನಿವರ್ಸಿಟಿ ಆಫ್‌ ಅಗ್ರಿಕಲ್ಚರಲ್‌ ಸಾಯನ್ಸಸ್‌ ಎಂಡ್‌ ಟೆಕ್ನಾಲಜಿ ಇಲ್ಲಿ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳು ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವೆ ಉಂಟಾದ ಸಂಘರ್ಷದ ಕುರಿತಂತೆ ಏಳು ಕಾಶ್ಮೀರಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ವಿದ್ಯಾರ್ಥಿಗಳನ್ನು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಸೆಕ್ಷನ್‌ 13 ಹಾಗೂ ಐಪಿಸಿಯ ಸೆಕ್ಷನ್‌ 505 ಹಾಗೂ 506 ಅನ್ವಯ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಗಂದೇರ್ಬಲ್‌ ಎಸ್‌ಪಿ ನಿಖಿಲ್‌ ಬೋರ್ಕರ್‌ ಹೆಚ್ಚಿನ ಮಾಹಿತಿ ನೀಡಿಲ್ಲ. ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದಷ್ಟೇ ಅವರು ಹೇಳಿದ್ದಾರೆ ಎಂದು scroll.in ವರದಿ ಮಾಡಿದೆ.

ವಿಶ್ವಕಪ್‌ ಫೈನಲ್‌ ಪಂದ್ಯ ನಡೆದ ಮರುದಿನ ಜಮ್ಮು ಕಾಶ್ಮೀರದ ಹೊರಗಿನ ವಿದ್ಯಾರ್ಥಿಯೊಬ್ಬ ದಾಖಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದರೆ ವಿದ್ಯಾರ್ಥಿಗಳನ್ನು ನವೆಂಬರ್‌ 20ರಂದು ಬಂಧಿಸಲಾಗಿದೆ.

ವಿವಿಯ ಪಶುವಿಜ್ಞಾನ ಮತ್ತು ಪಶುಸಂಗೋಪನಾ ವಿಭಾಗದ ಏಳು ವಿದ್ಯಾರ್ಥಿಗಳು ಭಾರತವನ್ನು ಬೆಂಬಲಿಸಿದ್ದಕ್ಕಾಗಿ ತನ್ನನ್ನು ನಿಂದಿಸಿ ತನಗೆ ಬೆದರಿಕೆಯೊಡ್ಡಿದ್ದರು. ಬಾಯ್ಮುಚ್ಚು ಇಲ್ಲದೇ ಹೋದಲ್ಲಿ ಗುಂಡಿಕ್ಕಲಾಗುವುದು ಎಂದು ಬೆದರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಆರೋಪಿ ವಿದ್ಯಾರ್ಥಿಗಳು ಪಾಕ್‌ ಪರ ಘೋಷಣೆಗಳನ್ನು ಪಂದ್ಯದ ನಂತರ ಕೂಗಿದ್ದರು ಇದರಿಂದಾಗಿ ವಿವಿಯಲ್ಲಿರುವ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಭಯ ಆವರಿಸಿತ್ತು ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ವಿವಿಯಲ್ಲಿ ಯಾವುದೇ ಗಲಾಟೆ ಅಥವಾ ಸಂಘರ್ಷ ನಡೆದಿಲ್ಲ ಆದರೆ ಕೆಲ ವಿದ್ಯಾರ್ಥಿಗಳು ಹಾಸ್ಟೆಲಿನಲ್ಲಿ ಘೋಷಣೆ ಕೂಗಿದ್ದನ್ನು ದೂರುದಾರ ವಿದ್ಯಾರ್ಥಿಗಳು ಸೆರೆಹಿಡಿದು ಪೊಲೀಸರಿಗೆ ನೀಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News