60 ಕೋ.ರೂ.ವಂಚನೆ ಪ್ರಕರಣ : ನಟಿ ಶಿಲ್ಪಾ ಶೆಟ್ಟಿ ವಿಚಾರಣೆ
ನಟಿ ಶಿಲ್ಪಾ ಶೆಟ್ಟಿ | Photo Credit : NDTV
ಮುಂಬೈ,ಅ.7: 60 ಕೋ.ರೂ.ಗಳ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮುಂಬೈ ಪೋಲಿಸ್‌ನ ಆರ್ಥಿಕ ಅಪರಾಧಗಳ ಘಟಕದ(ಇಒಡಬ್ಲ್ಯು) ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ.
ಶಿಲ್ಪಾರನ್ನು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು ಎಂದು ಮುಂಬೈ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ವಿಚಾರಣೆಗಾಗಿ ಮುಂಬೈ ಪೋಲಿಸರು ಶಿಲ್ಪಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಿಲ್ಪಾ ಪೋಲಿಸರಿಗೆ ತನ್ನ ಜಾಹೀರಾತು ಕಂಪೆನಿಯ ಬ್ಯಾಂಕ್ ಖಾತೆಯಲ್ಲಿ ನಡೆದಿದ್ದ ವಹಿವಾಟುಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸಿದ್ದಾರೆ. ಅವರು ಹಲವು ದಾಖಲೆಗಳನ್ನೂ ಹಸ್ತಾಂತರಿಸಿದ್ದು, ಅವುಗಳನ್ನು ಪೋಲಿಸರು ಪರಿಶೀಲಿಸುತ್ತಿದ್ದಾರೆ.
ಇದೇ ಪ್ರಕರಣದಲ್ಲಿ ಇಒಡಬ್ಲ್ಯು ಸೆಪ್ಟಂಬರ್‌ನಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ಶಿಲ್ಪಾ ಮತ್ತು ರಾಜ್ ತನಗೆ 60 ಕೋ.ರೂ.ಗೂ ಅಧಿಕ ಮೊತ್ತವನ್ನು ವಂಚಿಸಲು ಪಿತೂರಿ ನಡೆಸಿದ್ದರು ಎಂದು ಆರೋಪಿಸಿರುವ ಉದ್ಯಮಿ ದೀಪಕ್ ಕೊಠಾರಿಯವರು, 2015 ಮತ್ತು 2023ರ ನಡುವೆ ವ್ಯವಹಾರ ವಿಸ್ತರಣೆಯ ಹೆಸರಿನಲ್ಲಿ ಪಡೆದಿದ್ದ ಹಣವನ್ನು ವೈಯಕ್ತಿಕ ವೆಚ್ಚಗಳಿಗಾಗಿ ಪೋಲು ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
60 ಕೋ.ರೂ.ಗಳಲ್ಲಿ ನಟಿಯರಾದ ಬಿಪಾಶಾ ಬಸು ಮತ್ತು ನೇಹಾ ಧುಪಿಯಾ ಅವರ ಶುಲ್ಕಗಳನ್ನು ಪಾವತಿಸಲಾಗಿದೆ ಎಂದು ನಂತರ ರಾಜ್ ಹೇಳಿಕೊಂಡಿದ್ದರು.