×
Ad

ನಾಲ್ವರನ್ನು ಕೊಂದ ಬಳಿಕ ಸ್ವಯಂ ಗುಂಡು ಹಾರಿಸಿಕೊಳ್ಳಲೇ ಎಂದು ಪತ್ನಿಗೆ ಕರೆ ಮಾಡಿ ಕೇಳಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್

Update: 2023-10-28 13:08 IST

ಆರೋಪಿ ಚೇತನ್‌ ಚೌಧರಿ

ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಹಿರಿಯ ಸಹೋದ್ಯೋಗಿ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಾನ್‌ಸ್ಟೆಬಲ್ ಚೇತನ್‌ ಸಿಂಹ ಚೌಧರಿ ತನ್ನ ಕೃತ್ಯದ ಬಳಿಕ ಪತ್ನಿಗೆ ಕರೆ ಮಾಡಿ ತಾನು ದೊಡ್ಡ ತಪ್ಪು ಮಾಡಿದ್ದೇನೆ, ನಾನೂ ಶೂಟ್‌ ಮಾಡಿಕೊಳ್ಳಲೇ ಎಂದು ಕೇಳಿದ್ದ ಎಂದು ಆರೋಪಿಯ ಪತ್ನಿ ಪ್ರಿಯಾಂಕಾ ಅವರು ತಿಳಿಸಿದ್ದಾರೆ.

ಜುಲೈ ಘಟನೆಯ ನಂತರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಪ್ರಕರಣದ ತನಿಖಾ ಸಂಸ್ಥೆಯಾದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಪತ್ನಿ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ.

ಆರೋಪಿಯು ಮೆದುಳಿನಲ್ಲಿ "ರಕ್ತ ಹೆಪ್ಪುಗಟ್ಟುವಿಕೆ" ಹೊಂದಿದ್ದು, ಅದಕ್ಕಾಗಿ ಔಷಧ ತೆಗೆದುಕೊಳ್ಳುತ್ತಿದ್ದ ಎಂದು ಆತನ ಪತ್ನಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಜುಲೈ 31 ರಂದು ಪಾಲ್ಘರ್ ರೈಲು ನಿಲ್ದಾಣದ ಬಳಿ ಮುಂಬೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಿರಿಯ ಸಹೋದ್ಯೋಗಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಚೇತನ್ ಚೌಧರಿ ವಿರುದ್ಧ ಜಿಆರ್‌ಪಿ ಅಕ್ಟೋಬರ್ 20 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.

ಆರ್ ಪಿ ಎಫ್ ಜವಾನ ಚೇತನ್ ಸಿಂಗ್ ಮೂವರು ಮುಸ್ಲಿಮರು ಮತ್ತು ಇನ್ನೊಬ್ಬರು ಆದಿವಾಸಿ ಸಮುದಾಯಕ್ಕೆ ಸೇರಿದ ಟೀಕಾರಮ್‌ ಮೀನಾ ಎಂಬವರನ್ನು ಹತ್ಯೆ ಮಾಡಿದ್ದ. “ಭಾರತದಲ್ಲಿ ಇರಬೇಕಾದರೆ ಮೋದಿ ಮತ್ತು ಯೋಗಿಗೆ ಮತ ಹಾಕಬೇಕು” ಎಂದು ಕೃತ್ಯದ ವೇಳೆ ಆತ ಹೇಳುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ), 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ರೈಲ್ವೆ ಕಾಯಿದೆಯ ನಿಬಂಧನೆಗಳು ಮತ್ತು ಮಹಾರಾಷ್ಟ್ರ ಆಸ್ತಿ ವಿರೂಪಗೊಳಿಸುವಿಕೆ ಮತ್ತು ತಡೆಗಟ್ಟುವಿಕೆ ಕಾಯಿದೆ ಹಾಗೂ ಇತರ ಸಂಬಂಧಿತ ಪ್ರಕರಣದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಗುಂಡಿನ ದಾಳಿ ನಡೆದ ದಿನ ಪತಿ ಫೋನ್ ಮಾಡಿ ತನ್ನ ಕೊಲೆ ಕೃತ್ಯದ ಬಗ್ಗೆ ತಿಳಿಸಿದ್ದಾಗಿ ಪ್ರಿಯಾಂಕಾ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ನಾನು ಎಸ್‌ಐ ಮತ್ತು ಮೂರು ಜನರನ್ನು ಕೊಂದಿದ್ದೇನೆ. ಒಂದು ದೊಡ್ಡ ತಪ್ಪಾಗಿದೆ. ನಾನು ನನ್ನನ್ನೂ ಶೂಟ್ ಮಾಡಿಕೊಳ್ಳಲೇ?" ಎಂದು ಕಾನ್‌ಸ್ಟೆಬಲ್ ಚೌಧರಿ ತನ್ನ ಪತ್ನಿಯ ಬಳಿ ಕೇಳಿದ್ದ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಕೆ ತನ್ನ ಪತಿಯನ್ನು ಪೊಲೀಸರ ಮುಂದೆ ಶರಣಾಗುವಂತೆ ಕೇಳಿಕೊಂಡಿದ್ದಾಳೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News