ಪ್ರಶ್ನೆ ಕೇಳಲು ಹಣ ಪಡೆದ ಪ್ರಕರಣ | ಮಹುವಾ ಮೊಯಿತ್ರಾ ವಿರುದ್ಧದ ಲೋಕಪಾಲ್ ಆದೇಶ ರದ್ದು: ದಿಲ್ಲಿ ಹೈಕೋರ್ಟ್
ಮಹುವಾ ಮೊಯಿತ್ರಾ | Photo Credit : PTI
ಹೊಸದಿಲ್ಲಿ, ಡಿ. 19: ಪ್ರಶ್ನೆ ಕೇಳಲು ಹಣ ಪಡೆದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ರದ್ದುಗೊಳಿಸಿದೆ.
ಮಹುವಾ ಮೊಯಿತ್ರಾ ಅವರ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತ್ರಪಾಲ್ ಹಾಗೂ ಹರೀಶ್ ವಿದ್ಯಾನಾಥನ್ ಶಂಕರ್ ಅವರ ಪೀಠ ಈ ಆದೇಶ ನೀಡಿತು.
‘‘ಆದೇಶವನ್ನು ರದ್ದುಗೊಳಿಸಲಾಗಿದೆ. ಲೋಕಪಾಲ್ ಹಾಗೂ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 20ರ ಅಡಿಯ ನಿಯಮಗಳ ಪ್ರಕಾರ ಅನುಮತಿ ನೀಡುವುದನ್ನು ಪರಿಶೀಲಿಸಿ ನಿರ್ಧರಿಸುವಂತೆ ನಾವು ಲೋಕಪಾಲರನ್ನು ಕೇಳಿದ್ದೇವೆ. ಲೋಕಪಾಲರು ಈ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು’’ ಎಂದು ಪೀಠ ಹೇಳಿತು.
ಪ್ರಶ್ನೆ ಕೇಳಲು ಹಣ ಪಡೆದ ಹಗರಣ ಉದ್ಯಮಿಯೊಬ್ಬರಿಂದ ನಗದು ಹಾಗೂ ಕೊಡುಗೆಗಳನ್ನು ಪಡೆಯುವ ಸಲುವಾಗಿ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.