ಪಂಜಾಬ್ | ಆಪ್ ಶಾಸಕಿ ರಾಜೀನಾಮೆ
ಗಾಯಕಿ ಅನ್ಮೋಲ್ : PC : NDTV
ಚಂಡೀಗಢ: ಆಮ್ ಆದ್ಮಿ ಪಕ್ಷ (ಆಪ್)ದ ನಾಯಕಿ ಹಾಗೂ ಗಾಯಕಿ ಅನ್ಮೋಲ್ ಗಗನ್ ಮಾನ್ ಪಂಜಾಬ್ ವಿಧಾನಸಭೆ ಸದಸ್ಯತ್ವಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ತಾನು ರಾಜಕೀಯದಿಂದಲೇ ನಿವೃತ್ತಿಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ.
ಖರರ್ ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ಮೋಲ್ ತನ್ನ ರಾಜೀನಾಮೆಯನ್ನು ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್‌ರಿಗೆ ಕಳುಹಿಸಿದ್ದಾರೆ.
‘‘ನನ್ನ ಹೃದಯ ಭಾರವಾಗಿದೆ. ಆದರೆ, ರಾಜಕೀಯವನ್ನು ತೊರೆಯಲು ನಾನು ನಿರ್ಧರಿಸಿದ್ದೇನೆ. ಶಾಸಕಿ ಸ್ಥಾನಕ್ಕೆ ನಾನು ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು’’ ಎಂದು ಅವರು ಸಾಮಾಜಿಕ ಮಾಧ್ಯಮದ ‘ಎಕ್ಸ್’ನಲ್ಲಿ ಬರೆದಿದ್ದಾರೆ.
2022ರಲ್ಲಿ ನಡೆದ ಪಂಜಾಬ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅವರು ಖರಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರು ಮುಖ್ಯಮಂತ್ರಿ ಭಗವಂತ ಮಾನ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ವಲ್ಪ ಸಮಯ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಸಚಿವ ಸಂಪುಟ ಪುನರ‌್ರಚನೆಯಲ್ಲಿ ಅವರನ್ನು ಕೈಬಿಡಲಾಗಿತ್ತು.
ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಜನಪ್ರಿಯ ಪಂಜಾಬಿ ಗಾಯಕಿಯಾಗಿದ್ದರು.