PCBಗಳು, ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ: ಕೇಂದ್ರ
Photo Credit : PTI
ಹೊಸದಿಲ್ಲಿ,ಡಿ.17: ದಿಲ್ಲಿ ಮತ್ತು ಹೆಚ್ಚಿನ ಉತ್ತರ ಭಾರತ ತೀವ್ರ ವಾಯುಮಾಲಿನ್ಯದಿಂದ ತತ್ತರಿಸಿರುವ ನಡುವೆ ಕೇಂದ್ರ ಪರಿಸರ ಸಚಿವಾಲಯವು ದೇಶಾದ್ಯಂತ ಮಾಲಿನ್ಯ ನಿಯಂತ್ರಣ ಮಂಡಳಿಗಳು (PCB) ಮತ್ತು ಸಮಿತಿಗಳಲ್ಲಿ ಶೇ.45.6ರಷ್ಟು ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳು ಖಾಲಿಯಿವೆ ಎಂದು ಸಂಸತ್ತಿನಲ್ಲಿ ತಿಳಿಸಿದೆ.
ಇತ್ತೀಚಿಗೆ ಲೋಕಸಭೆಯಲ್ಲಿ ಸಿಪಿಎಂ ಸಂಸದ ರತ್ನವೇಲ್ ಸಚ್ಚಿದಾನಂದಂ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಪರಿಸರ ಖಾತೆ ರಾಜ್ಯಸಚಿವ ಕೀರ್ತಿವರ್ಧನ್ ಸಿಂಗ್ ಅವರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಸಿಪಿಸಿಬಿ) ಶೇ.16.28ರಷ್ಟು ಇಂತಹ ಹುದ್ದೆಗಳು ಖಾಲಿಯಿವೆ ಎಂದು ತಿಳಿಸಿದರು.
ಸಿಪಿಸಿಬಿಯಲ್ಲಿ ಮಂಜೂರಾದ 393 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 64 ಖಾಲಿಯಿವೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ (ಎಸ್‌ಪಿಸಿಬಿ) 6,137 ಹುದ್ದೆಗಳ ಪೈಕಿ 2,921 ಮತ್ತು ದಿಲ್ಲಿ-ಎನ್‌ಸಿಆರ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಲಿನ್ಯನಿಯಂತ್ರಣ ಸಮಿತಿಗಳಲ್ಲಿ (ಪಿಸಿಸಿ) 402 ಹುದ್ದೆಗಳ ಪೈಕಿ 176 ಹುದ್ದೆಗಳು ಖಾಲಿಯಿವೆ. ಒಟ್ಟಾರೆಯಾಗಿ 6,932 ವೈಜ್ಞಾನಿಕ ಮತ್ತು ತಾಂತ್ರಿಕ ಹುದ್ದೆಗಳ ಪೈಕಿ 3,161 ಅಥವಾ ಶೇ.45.6ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಸಿಂಗ್ ವಿವರಿಸಿದರು.
ಎಸ್‌ಪಿಸಿಬಿಗಳು ಮತ್ತು ಪಿಸಿಸಿಗಳು ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಆಡಳಿತಾತ್ಮಕ ನಿಯಂತ್ರಣದಲ್ಲಿವೆ ಮತ್ತು ಅವುಗಳಲ್ಲಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸಂಬಂಧಿಸಿದ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶದ್ದಾಗಿದೆ ಎಂದು ತಿಳಿಸಿದ ಸಿಂಗ್,ಎಸ್‌ಪಿಸಿಬಿ ಮತ್ತು ಪಿಸಿಸಿಗಳು ತಮ್ಮ ನಿಯಮಾವಳಿಗಳಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳುತ್ತವೆ ಎಂದು ಹೇಳಿದರು.