ಪುಣೆ ಜಮೀನು ಖರೀದಿ ವಿವಾದ: ನನ್ನ ಪುತ್ರನಿಗೆ ಅದು ಸರಕಾರಿ ಜಮೀನು ಎಂದು ತಿಳಿದಿರಲಿಲ್ಲ ಎಂದ ಅಜಿತ್ ಪವಾರ್
ಅಜಿತ್ ಪವಾರ್ (Photo: PTI)
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರ ಪುತ್ರ ಪುಣೆಯಲ್ಲಿನ ಸರಕಾರಿ ಜಮೀನು ಖರೀದಿಸಿರುವ ಕುರಿತು ಭಾರಿ ವಿವಾದ ಭುಗಿಲೆದ್ದಿರುವ ಬೆನ್ನಿಗೇ, ತಮ್ಮ ಪುತ್ರನ ನಡೆಯನ್ನು ಸಮರ್ಥಿಸಿಕೊಂಡಿರುವ ಅಜಿತ್ ಪವಾರ್, ಅದು ಸರಕಾರಿ ಜಮೀನು ಎಂದು ನನ್ನ ಪುತ್ರ ಹಾಗೂ ಆತನ ಪಾಲುದಾರನಿಗೆ ತಿಳಿದಿರಲಿಲ್ಲ. ಅದು ಸರಕಾರಿ ಜಮೀನು ಎಂದು ತಿಳಿದ ಕೂಡಲೇ ಆ ಖರೀದಿಯನ್ನು ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪುಣೆಯಲ್ಲಿನ 40 ಎಕರೆ ಜಮೀನು ಖರೀದಿಯಲ್ಲಿ ವ್ಯಾಪಕ ಪ್ರಮಾಣದ ಅಪಮೌಲ್ಯೀಕರಣ, ವಿಧಿ-ವಿಧಾನದಲ್ಲಿ ಅಕ್ರಮಗಳು ಹಾಗೂ ರಾಜಕೀಯ ಪ್ರಭಾವ ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಿಗೇ, ಎನ್ಸಿಪಿ ಮುಖ್ಯಸ್ಥರೂ ಆದ ಅಜಿತ್ ಪವಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪಾಲುದಾರರಾಗಿರುವ ಅಮೆಡಿಯ ಎಂಟರ್ ಪ್ರೈಸಸ್ ಸಂಸ್ಥೆ ಸುಮಾರು 1,800 ಕೋಟಿ ರೂ. ಮೌಲ್ಯದ ಜಮೀನನ್ನು ಕೇವಲ ಸುಮಾರು 300 ಕೋಟಿ ರೂ.ಗೆ ಖರೀದಿಸಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಜಿತ್ ಪವಾರ್, “ಈ 300 ಕೋಟಿ ರೂ. ಖರೀದಿ ವ್ಯವಹಾರದ ಬಗ್ಗೆ ಸರಕಾರ ನೇಮಿಸಿರುವ ಸಮಿತಿಯೊಂದು ತನಿಖೆ ನಡೆಸುತ್ತಿದ್ದು, ಇನ್ನು ಒಂದು ತಿಂಗಳೊಳಗೆ ತನ್ನ ವರದಿ ಸಲ್ಲಿಸಲಿದೆ” ಎಂದು ತಿಳಿಸಿದ್ದಾರೆ.
“ಈ ವ್ಯವಹಾರಕ್ಕೆ ಸಂಬಂಧಿಸಿದ ನೋಂದಣಿ ದಾಖಲೆಗಳನ್ನು ರದ್ದುಗೊಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಸಲ್ಲಿಸಲಾಗಿದೆ. ಒಂದೇ ಒಂದು ರೂಪಾಯಿ ಕೂಡಾ ಕೈಬದಲಾವಣೆಯಾಗಿಲ್ಲ. ಪ್ರಶ್ನೆಗೊಳಗಾಗಿರುವ ಜಮೀನು ಸರಕಾರದ್ದಾಗಿದ್ದು, ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಈ ವಿಷಯದ ಕುರಿತು ನನ್ನ ಪುತ್ರ ಪಾರ್ಥ್ ಮತ್ತು ಆತನ ಪಾಲುದಾರ ದಿಗ್ವಿಜಯ್ ಪಾಟೀಲ್ ಗೆ ತಿಳಿದಿರಲಿಲ್ಲ” ಎಂದು ಅಜಿತ್ ಪವಾರ್ ಹೇಳಿದ್ದಾರೆ.