×
Ad

18 ವರ್ಷಗಳ ಹಳೆಯ ವಿಡಿಯೊ ರಿಲೀಸ್ ಮಾಡಿದ ಲಲಿತ್ ಮೋದಿ: ಅಮಾನವೀಯ ನಡೆ ಎಂದು ಖಂಡಿಸಿದ ಶ್ರೀಶಾಂತ್ ಪತ್ನಿ

Update: 2025-08-30 20:20 IST

PC ; X 

ಹೊಸದಿಲ್ಲಿ: ಭಾರತ ತಂಡ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಭಾರತ ತಂಡದ ಮಾಜಿ ವೇಗದ ಬೌಲರ್ ಶ್ರೀಶಾಂತ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದ ಹಳೆಯ ವಿಡಿಯೊವನ್ನು ಇಂಡಿಯನ್ ಪ್ರೀಮಿಯರ್ ಲೀಗ್ ನ ಮಾಜಿ ಆಯುಕ್ತ ಲಲಿತ್ ಮೋದಿ ಹಂಚಿಕೊಂಡಿದ್ದಾರೆ.

ಇದರ ಬೆನ್ನಿಗೇ, ಲಲಿತ್ ಮೋದಿ ಹಾಗೂ ಆಸ್ಟ್ರೇಲಿಯಾ ತಂಡದ ಮಾಜಿ ಬ್ಯಾಟರ್ ಮೈಕೇಲ್ ಕ್ಲಾರ್ಕ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಶ್ರೀ ಶಾಂತ್ ಪತ್ನಿ ಭುವನೇಶ್ವದರಿ ಶ್ರೀ ಶಾಂತ್, “ಈ ಕೃತ್ಯ ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ” ಎಂದು ಖಂಡಿಸಿದ್ದಾರೆ.

ಆಸೀಸ್ ದಂತಕತೆ ಮೈಕೇಲ್ ಕ್ಲಾರ್ಕ್ ರ ‘ಬಿಯಾಂಡ್2’ ಪಾಡ್ ಕಾಸ್ಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಲಲಿತ್ ಮೋದಿ ಮತ್ತು ಕ್ಲಾರ್ಕ್ ಅವರು 2008ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡಗಳ ನಡುವಿನ ಪಂದ್ಯದಲ್ಲಿ ನಡೆದಿದ್ದ ಘಟನೆಯೊಂದರ ಇಲ್ಲಿಯವರೆಗೂ ಯಾರೂ ನೋಡಿರದಿದ್ದ ದೃಶ್ಯ ಗಳನ್ನು ಬಹಿರಂಗಗೊಳಿಸಿದ್ದರು.

ಪಂದ್ಯದ ನಂತರ ಕೈಕುಲುಕುವ ವೇಳೆ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಗೆ ಕಪಾಳ ಮೋಕ್ಷ ಮಾಡಿದ್ದರು. ಆ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಅವರು ಮುಂಬೈ ತಂಡದ ನಾಯಕರಾಗಿದ್ದರು ಹಾಗೂ ಅವರ ತಂಡ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ವಿರುದ್ಧ 66 ರನ್ ಗಳಿಂದ ಸೋತಿತ್ತು.

ಈ ಅನಿರೀಕ್ಷಿತ ಘಟನೆಯಿಂದ ಶ್ರೀಶಾಂತ್ ಕಣ್ಣೀರು ಹಾಕಿದ್ದರು. ಆಗ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕ ಮಹೇಲ ಜಯವರ್ಧನೆ ಅವರನ್ನು ಸಮಾಧಾನ ಪಡಿಸಿದ್ದರು. ಈ ಘಟನೆ ವ್ಯಾಪಕವಾಗಿ ಸುದ್ದಿಯಾದರೂ, ವಿಡಿಯೊ ಮಾತ್ರ ಲಭ್ಯವಾಗಿರಲಿಲ್ಲ. ಇದೀಗ 18 ವರ್ಷಗಳ ನಂತರ, ಈ ವಿಡಿಯೊ ಬಹಿರಂಗಗೊಂಡಿದೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಭುವನೇಶ್ವೆರಿ ಶ್ರೀ ಶಾಂತ್, “ಲಲಿತ್ ಮೋದಿ ಹಾಗೂ ಮೈಕೇಲ್ ಕ್ಲಾರ್ಕ್ ಗೆ ನಾಚಿಕೆಯಾಗಬೇಕು. ಅಗ್ಗದ ಪ್ರಚಾರ ಮತ್ತು ಅಭಿಪ್ರಾಯ ಪಡೆಯಲು 2008ರಲ್ಲಿ ನಡೆದಿದ್ದ ಘಟನೆಯನ್ನು ಎಳೆದು ತಂದಿರುವ ನೀವು ಮನುಷ್ಯರೇ ಅಲ್ಲ. ಶ್ರೀ ಶಾಂತ್ ಮತ್ತು ಹರ್ಭಜನ್ ಇಬ್ಬರೂ ಬಹಳ ಹಿಂದೆಯೇ ಬದಲಾಗಿದ್ದಾರೆ. ಅವರಿಗೆ ಈಗ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನೀವು ಮತ್ತೆ ಅವರ ಹಳೆಯ ಗಾಯವನ್ನು ಕೆರೆಯಲು ಯತ್ನಿಸುತ್ತಿದ್ದೀರಿ. ಇದು ಸಂಪೂರ್ಣವಾಗಿ ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ” ಎಂದು ಖಂಡಿಸಿದ್ದಾರೆ.

“ಈ ದೃಶ್ಯಗಳ ಬಹಿರಂಗದಿಂದ ನಮ್ಮ ಕುಟುಂಬಕ್ಕೆ ನೋವುಂಟಾಗಿದದೆ. ತಮ್ಮದಲ್ಲದ ತಪ್ಪಿಗೆ ಈಗ ಪ್ರಶ್ನೆ ಮತ್ತು ಅವಮಾನಗಳನ್ನು ಎದುರಿಸಬೇಕಾದ ಪರಿಸ್ಥಿತಿ ಅವರ ಮುಗ್ಧ ಮಕ್ಕಳಿಗೆ ಬಂದಿದೆ. ಅವರನ್ನು ಘಾಸಿಗೊಳಿಸಿದ್ದಕ್ಕಾಗಿ ಇಬ್ಬರ ಮೇಲೂ ಮೊಕದ್ದಮೆ ಹೂಡಬೇಕು” ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ನಂತರ ಹರ್ಭಜನ್ ಸಿಂಗ್ ಅವರಿಗೆ ಎಂಟು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News