×
Ad

ಯುದ್ಧ ವಿರೋಧಿ ಪೋಸ್ಟ್ ಗಳಿಗಾಗಿ SRM ವಿವಿಯ ದಲಿತ ಕ್ರೈಸ್ತ ಪ್ರಾಧ್ಯಾಪಕಿಯ ವಜಾ

ʼಆಪರೇಷನ್ ಸಿಂಧೂರʼ ಸಂದರ್ಭದಲ್ಲಿ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಪ್ರಾಧ್ಯಾಪಕಿ

Update: 2025-12-07 21:33 IST

Photo credit : thenewsminute

ಚೆನ್ನೈ: ʼಆಪರೇಷನ್ ಸಿಂಧೂರʼ ಸಂದರ್ಭದಲ್ಲಿ ಯುದ್ಧ ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಇಲ್ಲಿಯ ಎಸ್ಆರ್‌ಎಂ ವಿವಿಯ ಸಹಾಯಕ ಪ್ರಾಧ್ಯಾಪಕಿ, ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಲೋರಾ ಶಾಂತಕುಮಾರ ಅವರನ್ನು ವಜಾಗೊಳಿಸಲಾಗಿದೆ. ಅವರ ‘ಗಂಭೀರ ದುರ್ವರ್ತನೆ’ಯನ್ನು ಆಂತರಿಕ ವಿಚಾರಣೆಯು ದೃಢಪಡಿಸಿದೆ ಎಂದು thenewsminute.com ವರದಿ ಮಾಡಿದೆ.

ಕಳೆದ ಮೇ ತಿಂಗಳಿನಲ್ಲಿ ಶಾಂತಿಗಾಗಿ ಕರೆ ನೀಡಿದ್ದ ವಾಟ್ಸ್ಆ್ಯಪ್ ಸ್ಟೇಟಸ್ ಪೋಸ್ಟ್ ಮಾಡಿದ ಬಳಿಕ ವಿದ್ಯಾರ್ಥಿಗಳು ಲೋರಾ ಅವರನ್ನು ಅಪಹಾಸ್ಯ ಮಾಡಿದ್ದರೆನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಶಸ್ತ್ರ ಪಡೆಗಳ ವಿರುದ್ಧ ‘ಅನೈತಿಕ ಟೀಕೆಗಳನ್ನು’ ಪೋಸ್ಟ್ ಮಾಡಿದ್ದರು ಮತ್ತು ತನ್ನನ್ನು ಎಸ್ಆರ್‌ಎಂ ಬೋಧಕ ಸಿಬ್ಬಂದಿಯಾಗಿ ಗುರುತಿಸಿಕೊಂಡಿದ್ದರು ಎಂದು ವಜಾ ಆದೇಶದಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಅವರು ತನ್ನ ಕೆಲಸದಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ ಮತ್ತು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಎಸ್ಆರ್ಎಂ ವಿವಿಯ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ.ನಿಶಾ ಅಶೋಕನ್ ನೇತೃತ್ವದ ಆಂತರಿಕ ವಿಚಾರಣೆ ಸಮಿತಿಯು ಅ.30ರಂದು ತನ್ನ ವರದಿಯನ್ನು ಸಲ್ಲಿಸಿತ್ತು.

ಲೋರಾ ಅವರ ವಾಟ್ಸ್ಆ್ಯಪ್ ಸ್ಟೇಟಸ್, ಫೋನ್ ಸಂಖ್ಯೆ ಮತ್ತು ಭಾವಚಿತ್ರ ಬಲಪಂಥೀಯ ಹ್ಯಾಂಡಲ್ ಗಳಿಗೆ ಸೋರಿಕೆಯಾಗಿ ಆನ್ಲೈನ್ ನಿಂದನೆ, ಜೀವ ಬೆದರಿಕೆಗಳ ಕರೆಗಳ ಬಳಿಕ ಮೇ 8ರಂದು ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಅವರನ್ನು ‘ರಾಷ್ಟ್ರವಿರೋಧಿ’ ಎಂದು ಬ್ರ್ಯಾಂಡ್ ಮಾಡಲಾಗಿತ್ತು. ಸುರಕ್ಷತೆಗಾಗಿ ಬಲವಂತದಿಂದ ಚೆನ್ನೈ ನಿವಾಸವನ್ನು ತೊರೆದು ಕಲ್ಲಕುರಿಚಿಗೆ ಮರಳುವಂತೆ ಮಾಡಲಾಗಿತ್ತು ಎಂದು thenewsminute.com ವರದಿ ಮಾಡಿದೆ.

ಲೋರಾ ಮೇ 7ರಂದು ಒಟ್ಟು 12 ವಾಟ್ಸ್ಆ್ಯಪ್ ಸಂದೇಶಗಳನ್ನು ಹಂಚಿಕೊಂಡಿದ್ದು, ಇವುಗಳ ಪೈಕಿ ಕೇವಲ ಎರಡು ಪೋಸ್ಟ್ ಗಳು ಆನ್ಲೈನ್ನಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಒಂದು ಸಂದೇಶವು ಯುದ್ಧದಿಂದಾಗಿ ಆರ್ಥಿಕ ನಷ್ಟ ಮತ್ತು ಜೀವಹಾನಿಯನ್ನು ಉಲ್ಲೇಖಿಸಿದ್ದರೆ,ಇನ್ನೊಂದು ಯುದ್ಧದಲ್ಲಿ ನಾಗರಿಕರ ಹತ್ಯೆಗಳನ್ನು ಟೀಕಿಸಿತ್ತು ಮತ್ತು ಅದನ್ನು ಹೇಡಿತನದ ಕೃತ್ಯವೆಂದು ಬಣ್ಣಿಸಿತ್ತು.

ಜೂ.16ರಂದು ಹೊರಡಿಸಲಾಗಿದ್ದ ಚಾರ್ಜ್ ಮೆಮೊದಲ್ಲಿ ಲೋರಾ ವಿರುದ್ಧ ಸಶಸ್ತ್ರ ಪಡೆಗಳ ವಿರುದ್ಧ ಅನೈತಿಕ ಟೀಕೆಗಳನ್ನು ಮಾಡಿದ್ದ,ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದ ಮತ್ತು ದೇಶಭಕ್ತಿಯ ಕೊರತೆಯ ಆರೋಪಗಳನ್ನು ಹೊರಿಸಲಾಗಿತ್ತು.

ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಲೋರಾ, ತನ್ನ ಹೇಳಿಕೆಗಳು ರಾಷ್ಟ್ರವಿರೋಧಿಯಾಗಿರಲಿಲ್ಲ, ಅವು ಸೇನೆಯನ್ನೂ ಗುರಿಯಾಗಿಸಿಕೊಂಡಿರಲಿಲ್ಲ ಎಂದು ವಾದಿಸಿದ್ದರು.

ಅವರ ವಿವರಣೆಯ ಹೊರತಾಗಿಯೂ ವಿಚಾರಣಾ ಸಮಿತಿಯು ಅವರ ವಿರುದ್ಧದ ಎಲ್ಲ ಆರೋಪಗಳು ಸಾಬೀತಾಗಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

The News Minute ಜೊತೆ ಮಾತನಾಡಿದ ಲೋರಾ, ವಿಚಾರಣೆಯು ಕಣ್ಣೊರೆಸುವ ತಂತ್ರವಾಗಿದೆ ಮತ್ತು ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಕುಲಪತಿಗಳಿಗೆ ಮೇಲ್ಮನವಿ ಸಲ್ಲಿಸಲು ಲೋರಾ ಅವರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಈ ನಡುವೆ ಲೋರಾ ಮುಖ್ಯಮಂತ್ರಿಗಳ ಕೋಶಕ್ಕೆ ದೂರು ಸಲ್ಲಿಸಿದ ಬಳಿಕ ಮರೈಮಲೈ ನಗರ ಪೋಲಿಸರು ವಿವಿಯ ಕುಲಸಚಿವ ಡಾ.ಎಸ್.ಪೊನ್ನುಸ್ವಾಮಿ ಅವರಿಗೆ ಸಮನ್ಸ್ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News