ಮತಾಂತರ ದೂರು ನೀಡಿದ್ದಕ್ಕೆ ಪ್ರತೀಕಾರವಾಗಿ ವಿವಸ್ತ್ರಗೊಳಿಸಿ ಹಲ್ಲೆ, ಬಲವಂತವಾಗಿ ಮೂತ್ರ ಪಾನ; ಸಂತ್ರಸ್ತರ ಆರೋಪ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು.27: ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದಕ್ಕೆ ಪ್ರತೀಕಾರವಾಗಿ ಗುಂಪೊಂದು ತಮ್ಮನ್ನು ಅಪಹರಿಸಿ ಹಲ್ಲೆ ನಡೆಸಿದೆ ಹಾಗೂ ಬಲವಂತವಾಗಿ ಮೂತ್ರ ಕುಡಿಸಿದೆಯೆಂದು ಆರೋಪಿಸಿ ಉತ್ತರಪ್ರದೇಶದ ಬಹರಾಯಿಚ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಜುಲೈ 23ರಂದು ಈ ಘಟನೆ ನಡೆದಿರುವುದಾಗಿ ಹಲ್ಲೆಗೊಳಗಾದವರಲ್ಲೊಬ್ಬನಾದ ಚಂದನ್ ಮೌರ್ಯ ಎಂಬಾತ ರಾಮಗಾಂವ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಸರೆ. ತಾನು ಹಾಗೂ ಸೋದರಸಂಬಂಧಿ ಮೋಹಿತ್ ಮತ್ತು ಸ್ನೇಹಿತ ಅನ್ನು ಎಂಬವರ ಜೊತೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದಾಗ ಮೆಹಾರಿ ಬೈಖಾ ಗ್ರಾಮದ ನಿವಾಸಿಗಳಾದ ಶಹಾಬುದ್ದೀನ್ ಹಾಗೂ ಇನ್ನಿಬ್ಬರು ತಮ್ಮನ್ನು ಅಡ್ಡಗಟ್ಟಿದ್ದಾರೆ. ಅನಂತರ ಅನಾಸ್ ಹಾಗೂ ಝೀಶಾನ್ ಎಂಬವರು ಅವರೊಂದಿಗೆ ಸೇರಿಕೊಂಡರೆನ್ನಲಾಗಿದೆ. ಬಳಿಕ ಈ ಗುಂಪು ಚಂದನ್ ಹಾಗೂ ಮೋಹಿತಂರನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಥಳಿಸಿದೆಯೆಂದು ಆಪಾದಿಸಲಾಗಿದೆ.
ಆರೋಪಿಗಳು ತಮ್ಮನ್ನು ವಿವಸ್ತ್ರಗೊಳಿಸಿ, ರಾಡ್ ಹಾಗೂ ದೊಣ್ಣೆಗಳಿಂದ ಥಳಿಸಿದ್ದಾರೆಂದು ಚಂದನ್ ಆಪಾದಿಸಿದ್ದಾರೆ. ಆರೋಪಿಗಳು ಪಿಸ್ತೂಲ್ ತೋರಿಸಿ ‘ಇಸ್ಲಾಂ ಝಿಂದಾಬಾದ್’ ಎಂದು ಕೂಗುವಂತೆ ಬಲವಂತ ಪಡೆಸಿದ್ದಾರೆಂದು ಆತ ದೂರಿನಲ್ಲಿ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ದುರ್ಗಾ ಪ್ರಸಾದ್ ತಿವಾರಿ ಅವರು ಹೇಳಿಕೆ ನೀಡಿದ್ದು, ಈ ಎರಡು ಗುಂಪುಗಳ ನಡುವೆ ವೈಷಮ್ಯವಿತ್ತೆಂದು ಹೇಳಿದ್ದಾರೆ. ಹಲ್ಲೆಕೋರರು ಧಾರ್ಮಿಕ ಘೋಷಣೆಗಳನ್ನು ಕೂಗಿಸಿದ್ದಾರೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂತ್ರಸ್ತರು ನೀಡಿದ ಆರಂಭಿಕ ದೂರಿನಲ್ಲಿ ಈ ಆರೋಪವನ್ನು ಹೊರಿಸಿರಲಿಲ್ಲ. ಆನಂತರವಷ್ಟೇ ಅದನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು. ಶಹಾಬುದ್ದೀನ್, ಅನಾಸ್ ಹಾಗೂ ಝೀಶಾನ್ ಅವರ ಮೇಲೆ ಪ್ರಕರಣ ದಾಖಲಾಗಿದೆಯೆಂದು ಅವರು ಹೇಳಿದ್ದಾರೆ. ಇಬ್ಬರು ಆರೋಪಿಗಳನ್ನು ಮಾತೆರಾ ಬಳಿ ರಕ್ಷಿಸಲಾಗಿದೆ. ಅಪಹರಣಕ್ಕೆ ಬಳಸಲಾದ ಕಾರನ್ನು ಮುಟ್ಟುಗೋಲು ಹಾಕಲಾಗಿದೆಯೆಂದು ಅವರು ಹೇಳಿದ್ದಾರೆ.