×
Ad

ಮಾತುಕತೆಗೆ ಮುನ್ನ ಬೇಡಿಕೆಗಳ ಹೊಸ ಕರಡು ಸಲ್ಲಿಸಿ: ಎಲ್‌ಎಬಿ, ಕೆಡಿಎಗೆ ಗೃಹ ಸಚಿವಾಲಯ ಸೂಚನೆ

Update: 2025-11-03 20:37 IST

ಗೃಹ ಸಚಿವಾಲಯ | Pc : PTI 

ಶ್ರೀನಗರ, ನ. 3: ಮಾತುಕತೆಗೆ ಮುನ್ನ ತಮ್ಮ ಬೇಡಿಕೆಗಳ ಹೊಸ ಕರಡು ಸಲ್ಲಿಸಿ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಹಾಗೂ ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್ (ಕೆಡಿಎ)ಗೆ ಸೂಚಿಸಿದೆ.

‘‘ಕೆಡಿಎ ತನ್ನ ಬೇಡಿಕೆಗಳ ಪಟ್ಟಿಯ ವಿವರವಾದ ಕರಡನ್ನು ಸಿದ್ಧಪಡಿಸುತ್ತಿದೆ’’ ಎಂದು ಕೆಡಿಎಯ ಹಿರಿಯ ನಾಯಕ ಸಜ್ಜಾದ್ ಕಾರ್ಗಿಲ್ ತಿಳಿಸಿದ್ದಾರೆ. ‘‘ನಾವು ಬೇಡಿಕೆಗಳ ಕರಡು ರೂಪಿಸಲು ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ. ಲಡಾಖ್‌ ಗೆ ರಾಜ್ಯದ ಸ್ಥಾನ ಮಾನ, ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ಹಾಗೂ ಸ್ಥಳೀಯ ಜನರಿಗೆ ಉದ್ಯೋಗದ ಹಕ್ಕು ನೀಡುವುದು ನಮ್ಮ ಬೇಡಿಕೆಗಳಲ್ಲಿ ಒಳಗೊಂಡಿದೆ’’ ಎಂದು ಅವರು ಹೇಳಿದ್ದಾರೆ.

‘‘ಇದು ನಮ್ಮ ಪ್ರಮುಖ ಬೇಡಿಕೆಗಳ ಕುರಿತು ಆಳವಾದ ಮಾಹಿತಿ ನೀಡುವ ವಿವರವಾದ ಕರಡು ಪ್ರತಿಯಾಗಿರುತ್ತದೆ. ನಮಗೆ ಯಾವ ರೀತಿಯ ಶಾಸಕಾಂಗ ಬೇಕು, ವಿಧಾನ ಸಭೆಯ ಪಾತ್ರ ಹಾಗೂ ರಾಜ್ಯಪಾಲರ ಅಧಿಕಾರ ಏನಾಗಿರಬೇಕು ಹಾಗೂ ಇತರ ವಿಷಯಗಳ ಬಗ್ಗೆ ನಾವು ಇದರಲ್ಲಿ ಚರ್ಚಿಸಲಿದ್ದೇವೆ’’ ಎಂದು ಅವರು ಹೇಳಿದರು.

ಎಲ್‌ಎಬಿ ನಾಯಕರು ಕೂಡ ತಮ್ಮ ವಿವರವಾದ ಕರಡು ಪ್ರತಿಯನ್ನು ಸಿದ್ಧಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದರು. ‘‘ನಮ್ಮ ಕರಡು ಅಂತಿಮಗೊಂಡ ಬಳಿಕ, ನಾವು ಕರಡನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿದ್ದೇವೆ ಹಾಗೂ ಜಂಟಿ ಬೇಡಿಕೆಗಳ ವಿವರವಾದ ಪ್ರತಿಯನ್ನು ಸಲ್ಲಿಸಲಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.

ಹೊಸ ಕರಡು ಪ್ರಸ್ತಾವ ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯ ಸಮಯದ ಗಡು ನೀಡಿದೆಯೇ ಎಂಬ ಪ್ರಶ್ನೆಗೆ ಸಜ್ಜಾದ್ ನಕಾರಾತ್ಮಕವಾಗಿ ಉತ್ತರಿಸಿದರು. ‘‘ನಮ್ಮ ಬೇಡಿಕೆಗಳ ಜಂಟಿ ಕರಡನ್ನು ಈ ವಾರ ಸಲ್ಲಿಸುವ ನಿರೀಕ್ಷೆಯಲ್ಲಿದ್ದೇವೆ. ಕರಡು ಸ್ವೀಕರಿಸಿದ ಬಳಿಕ ಕೆಲವು ದಿನಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ನಿತ್ಯಾನಂದ ರಾಯ್ ಅವರು ಅಧ್ಯಕ್ಷತೆ ವಹಿಸುವ ಕೇಂದ್ರ ಗೃಹ ಸಚಿವಾಲಯದ ಉನ್ನತಾಧಿಕಾರ ಸಮಿತಿಯ ಸಭೆಗೆ ನಮ್ಮನ್ನು ಆಹ್ವಾನಿಸಲಿದ್ದಾರೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News