×
Ad

ನಿರ್ದಿಷ್ಟ ರೀತಿಯಲ್ಲಿ ಕಾನೂನು ಮಾಡಿ ಎಂದು ಶಾಸಕಾಂಗಕ್ಕೆ ನ್ಯಾಯಾಲಯಗಳು ಹೇಳುವಂತಿಲ್ಲ: ಸುಪ್ರೀಂ ಕೋರ್ಟ್

Update: 2025-02-14 19:53 IST

 ಸುಪ್ರೀಂ ಕೋರ್ಟ್ | PC : PTI

ಹೊಸದಿಲ್ಲಿ: ನಿರ್ದಿಷ್ಟ ರೀತಿಯಲ್ಲಿ ಕಾನೂನೊಂದನ್ನು ರೂಪಿಸುವಂತೆ ಶಾಸಕಾಂಗಕ್ಕೆ ನ್ಯಾಯಾಲಯಗಳು ನಿರ್ದೇಶನ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಇದೇ ವಿಷಯಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ದಿಲ್ಲಿ ಹೈಕೋರ್ಟ್ 2024ರ ಫೆಬ್ರವರಿಯಲ್ಲಿ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟಿನ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ತೀರ್ಪು ನೀಡಿದೆ.

‘‘ಪ್ರತಿಯೊಂದು ಸಂಗತಿಗಳನ್ನು ಪರಿಶೀಲಿಸಿದ ಬಳಿಕ ಸಂಸತ್ ನೂತನ ಕಾನೂನನ್ನು ರೂಪಿಸಿದೆ. ನಿರ್ದಿಷ್ಟ ರೀತಿಯಲ್ಲಿ ಕಾನೂನನ್ನು ರೂಪಿಸಿ ಎಂಬುದಾಗಿ ಶಾಸಕಾಂಗಕ್ಕೆ ನಿರ್ದೇಶನ ನೀಡಲು ಹೈಕೋರ್ಟ್‌ಗಳಿಗಾಗಲಿ ಸುಪ್ರೀಂ ಕೋರ್ಟ್‌ಗಾಗಲಿ ಅಧಿಕಾರವಿಲ್ಲ’’ ಎಂದು ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರಾಕರಿಸುತ್ತಾ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತು.

ದೂರುದಾರರು ಅಥವಾ ಸಂತ್ರಸ್ತರಿಗೆ ಉಚಿತವಾಗಿ ಆರೋಪಪಟ್ಟಿಯ ಪ್ರತಿಯನ್ನು ನೀಡುವಂತೆ ಜಿಲ್ಲಾ ನ್ಯಾಯಾಲಯಗಳು ಅಥವಾ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಕೇಂದ್ರ ಸರಕಾರದ ಪರವಾಗಿ ಹಾಜರಾದ ವಕೀಲರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ನ್ನು ಉಲ್ಲೇಖಿಸುತ್ತಾ, ಈ ಅರ್ಜಿಯು ವ್ಯರ್ಥ ಎಂದು ಹೇಳಿದರು.

ಪೊಲೀಸರು ಯಾವುದೇ ಮೊಕದ್ದಮೆ ಹೂಡಿದರೆ, ಪೊಲೀಸ್ ವರದಿ ಮತ್ತು ಮೊದಲ ಮಾಹಿತಿ ವರದಿ (ಎಫ್‌ಐಆರ್)ಯನ್ನು ಆರೋಪಿ ಮತ್ತು ಸಂತ್ರಸ್ತರಿಗೆ ಉಚಿತವಾಗಿ ಮ್ಯಾಜಿಸ್ಟ್ರೇಟರು ನೀಡಬೇಕು ಬಿಎನ್‌ಎಸ್‌ಎಸ್ 2023ರ ವಿಧಿ 230 ಹೇಳುತ್ತದೆ ಎಂದು ಕೇಂದ್ರದ ವಕೀಲರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News