ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನೇಕೆ ಜರುಗಿಸಬಾರದು?: ಉತ್ತರ ಪ್ರದೇಶ ಸರಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ಕುಶಿನಗರ ಮಸೀದಿಯ ಒಂದು ಪಾರ್ಶ್ವವನ್ನು ನೆಲಸಮಗೊಳಿಸುವ ಮೂಲಕ ನ್ಯಾಯಾಲಯಕ್ಕೆ ಅವಿಧೇಯತೆ ತೋರಿದ ಆರೋಪದ ಮೇಲೆ ನಿಮ್ಮ ಮೇಲೇಕೆ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸಬಾರದು ಎಂಬ ಕುರಿತು ಪ್ರತಿಕ್ರಿಯಿಸುವಂತೆ ಸೋಮವಾರ ಉತ್ತರ ಪ್ರದೇಶದ ಪ್ರಾಧಿಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮುಂದಿನ ಆದೇಶದವರೆಗೂ ಪ್ರಶ್ನೆಗೊಳಗಾಗಿರುವ ಮಸೀದಿಯನ್ನು ನೆಲಸಮಗೊಳಿಸಬಾರದು ಎಂದೂ ನ್ಯಾ. ಬಿ.ಆರ್.ಗವಾಯಿ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಾಸೀಹ್ ಅವರನ್ನೊಳಗೊಂಡ ನ್ಯಾಯಪೀಠ ನಿರ್ದೇಶನ ನೀಡಿತು.
ಉದ್ದೇಶಪೂರ್ವಕವಾಗಿ ನ್ಯಾಯಾಲಯಕ್ಕೆ ಅಗೌರವ ತೋರಲಾಗಿದೆ ಹಾಗೂ ಕಳೆದ ವರ್ಷದ ನವೆಂಬರ್ 13ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸುವಲ್ಲಿ ವಿಫಲವಾಗಿವೆ ಎಂದು ಕುಶಿನಗರದ ಸಂಬಂಧಿತ ಪ್ರಾಧಿಕಾರಗಳ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ಮೇಲಿನಂತೆ ಆದೇಶಿಸಿತು.
ನವೆಂಬರ್ 13ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ಯಾವುದೇ ಆಸ್ತಿಪಾಸ್ತಿಗಳನ್ನು ನೆಲಸಮಗೊಳಿಸಬಾರದು ಹಾಗೂ ಸಂತ್ರಸ್ತ ವ್ಯಕ್ತಿಗಳಿಗೆ ಪ್ರತಿಕ್ರಿಯಿಸಲು 15 ದಿನಗಳ ಪೂರ್ವ ಶೋಕಾಸ್ ನೋಟಿಸ್ ಜಾರಿಗೊಳಿಸಬೇಕು ಎಂದು ಭಾರತದಾದ್ಯಂತ ಅನ್ವಯವಾಗುವಂತೆ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ಆದರೆ, ಇತ್ತೀಚೆಗೆ ವಕೀಲ ಅಬ್ದುಲ್ ಖಾದಿರ್ ಅಬ್ಬಾಸಿ ಮೂಲಕ ಸಲ್ಲಿಕೆಯಾಗಿರುವ ನೂತನ ಅರ್ಜಿಯಲ್ಲಿ ಫೆಬ್ರವರಿ 9ರಂದು ಮದನಿ ಮಸೀದಿಯ ಹೊರ ಮತ್ತು ಮುಂಭಾಗದ ಆವರಣವನ್ನು ಪ್ರಾಧಿಕಾರಗಳು ನೆಲಸಮಗೊಳಿಸಿವೆ ಎಂದು ಆರೋಪಿಸಲಾಗಿದೆ.
ಪ್ರಶ್ನೆಗೊಳಗಾಗಿರುವ ಮಸೀದಿಯ ಕಟ್ಟಡವನ್ನು ಅರ್ಜಿದಾರರ ಖಾಸಗಿ ಜಮೀನಿನಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಹುಝೇಫಾ ಅಹ್ಮದಿ ವಾದಿಸಿದರು.
1999ರ ಮಂಜೂರಾತಿ ಆದೇಶದ ಪ್ರಕಾರ, ಮಸೀದಿಯು ಮಹಾನಗರ ಪಾಲಿಕೆ ಪ್ರಾಧಿಕಾರಗಳ ಅರ್ಹ ಮಂಜೂರಾತಿಯ ಮೂಲಕ ನಿರ್ಮಾಣಗೊಂಡಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳನ್ನು ಅತಿರೇಕವಾಗಿ ಉಲ್ಲಂಘಿಸಿ ಮಸೀದಿಯನ್ನು ನೆಲಸಮಗೊಳಿಸಲಾಗಿದೆ ಎಂದು ಅಹ್ಮದಿ ವಾದಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ನ್ಯಾಯಾಂಗ ನಿಂದನೆ ಕ್ರಮವನ್ನೇಕೆ ಜರುಗಿಸಬಾರದು ಎಂದು ಪ್ರಶ್ನಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ” ಎಂದು ಸೂಚಿಸಿ, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.
“ಮುಂದಿನ ಆದೇಶದವರೆಗೆ ಮಸೀದಿಯನ್ನು ನೆಲಸಮಗೊಳಿಸಬಾರದು” ಎಂದೂ ನ್ಯಾಯಾಲಯ ಸೂಚಿಸಿತು.