ಕೌಟುಂಬಿಕ ಹಿಂಸೆ ಕಾಯ್ದೆ: ವಸ್ತು ಸ್ಥಿತಿ ವರದಿ ಸಲ್ಲಿಸದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಚಾಟಿ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಕೌಟುಂಬಿಕ ಹಿಂಸೆ ಕಾಯ್ದೆ ಜಾರಿಯ ಕುರಿತು ವಸ್ತು ಸ್ಥಿತಿ ವರದಿ ಸಲ್ಲಿಸದ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ತಲಾ 5,000 ರೂ. ವೆಚ್ಚ ಪಾವತಿಸಿ, ಇನ್ನು ನಾಲ್ಕು ವಾರಗಳೊಳಗಾಗಿ ವಸ್ತು ಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿತು.
ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ, ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಸಲ್ಲಿಸಿದ ಮಾಹಿತಿಯನ್ನು ನ್ಯಾ. ಬಿ.ವಿ.ನಾಗರತ್ನ ಹಾಗೂ ಪ್ರಸನ್ನ ಬಿ.ವರಾಳೆ ಅವರನ್ನೊಳಗೊಂಡ ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.
“ಸಂಬಂಧಿತ ರಾಜ್ಯಗಳ ವಕೀಲರು ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಹೀಗಾಗಿ, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ 5,000 ರೂ. ವೆಚ್ಚ ಪಾವತಿಸಿ, ಇನ್ನು ನಾಲ್ಕು ವಾರಗಳೊಳಗಾಗಿ ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ” ಎಂದು ನ್ಯಾಯಪೀಠ ಹೇಳಿತು.
ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸದ ಸುಸ್ತಿದಾರ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳು ಸೇರಿವೆ ಎಂಬುದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.
ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ಡಾಮನ್ ಮತ್ತು ಡಯು, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಲಕ್ಷದ್ವೀಪ ಕೂಡಾ ತಮ್ಮ ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸಿಲ್ಲ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಲಾಯಿತು.
“5,000 ರೂ. ವೆಚ್ಚ ಪಾವತಿಸಿ, ಅದನ್ನು ಸಲ್ಲಿಸಿ. ಒಂದು ವೇಳೆ ನೀವು ಸಲ್ಲಿಸದಿದ್ದರೆ, ಮುಂದಿನ ಬಾರಿ ಇದು ದುಪ್ಪಟ್ಟಾಗಲಿದೆ” ಎಂದು ನ್ಯಾ. ನಾಗರತ್ನ ಎಚ್ಚರಿಸಿದರು. ನಂತರ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಲಾಯಿತು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005ರ ಜಾರಿಗೆ ಸಂಬಂಧಿಸಿದಂತೆ ವಸ್ತು ಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಡಿಸೆಂಬರ್ 2, 2024ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ನಂತರ, ಜನವರಿ 17ರಂದು ತಮ್ಮ ವಸ್ತು ಸ್ಥಿತಿ ವರದಿಗಳನ್ನು ಸಲ್ಲಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಫೆಬ್ರವರಿ 14ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ವಿಸ್ತರಿಸಿತ್ತು.