ಚುನಾವಣಾ ಆಯುಕ್ತರ ನೇಮಕ ಪ್ರಶ್ನಿಸುವ ಅರ್ಜಿ; ಆದ್ಯತೆಯ ನೆಲೆಯಲ್ಲಿ ನಾಳೆ ವಿಚಾರಣೆ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: 2023ರ ಕಾನೂನಿನ ಅಡಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಳನ್ನು ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ‘‘ಆದ್ಯತೆಯ ಮೇಲೆ’’ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಆಯ್ಕೆ ಸಮಿತಿಯ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಯನ್ನು ನಡೆಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠವು 2023ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ಹೊರತಾಗಿಯೂ, ಸರಕಾರವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಧರನ್ನು ಹೊರಗಿಟ್ಟು ಆಯ್ಕೆ ಪ್ರಕ್ರಿಯೆಗಳನ್ನು ನಡೆಸಿದೆ ಹಾಗೂ ಈ ಮೂಲಕ ಪ್ರಜಾಪ್ರಭುತ್ವದ ಅಣಕವಾಡಿದೆ ಎಂದು ಪ್ರಜಾಪ್ರಭುತ್ವದ ಸುಧಾರಣೆಗಾಗಿನ ಸಂಘ (ಎಡಿಆರ್) ಎಂಬ ಸರಕಾರೇತರ ಸಂಘಟನೆಯ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು.
‘‘ಈ ಅರ್ಜಿಯ ವಿಚಾರಣೆಯು ಫೆಬ್ರವರಿ 19 (ಬುಧವಾರ)ರಂದು ನಡೆಯಲಿದೆ. ಆದರೆ, ಅದರ ಸಂಖ್ಯೆ 41 ಆಗಿದೆ. ಸರಕಾರವು ಸಾಂವಿಧಾನಿಕ ಪೀಠದ ತೀರ್ಪನ್ನು ಕಡೆಗಣಿಸಿ 2023ರ ಕಾನೂನಿನ ಅಡಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ನೇಮಿಸಿದೆ. ಈ ವಿಷಯವು ತುರ್ತು ಪರಿಶೀಲನೆಗೆ ಒಳಪಡಬೇಕಾಗಿರುವುದರಿಂದ ದಯವಿಟ್ಟು ಆದ್ಯತೆಯ ನೆಲೆಯಲ್ಲಿ ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಿ’’ ಎಂದು ಅವರು ಮನವಿ ಮಾಡಿದರು.
ಇನ್ನೋರ್ವ ಅರ್ಜಿದಾರೆ ಜಯಾ ಠಾಕೂರ್ ಪರವಾಗಿ ಹಾಜರಾದ ವಕೀಲ ವರುಣ್ ಠಾಕೂರ್, ಹೊಸ ಕಾನೂನಿನ ಅಡಿಯಲ್ಲಿ ಸರಕಾರವು ಮೂರು ನೇಮಕಾತಿಗಳನ್ನು ಮಾಡಿದೆ ಹಾಗೂ ಇವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ’’ ಎಂದು ಹೇಳಿದರು.
ಆಗ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು, ಫೆಬ್ರವರಿ 19ರಂದು ತುರ್ತು ವಿಚಾರಣೆಗೆ ನಿಗದಿಪಡಿಸಲಾದ ಕೆಲವು ಪ್ರಕರಣಗಳ ಬಳಿಕ, ಈ ವಿಷಯವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಪ್ರಶಾಂತ್ ಭೂಷಣ್ ಮತ್ತು ಇತರ ಅರ್ಜಿದಾರರಿಗೆ ಭರವಸೆ ನೀಡಿತು.