ಒಂದು ಕೋಟಿ ರೂ. ಪರಿಹಾರ ಪಾವತಿಗೆ ಒಪ್ಪಿದ ಅಪಘಾತ ಪ್ರಕರಣದ ಆರೋಪಿ; ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು ಮಂಜೂರು
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯವು ಮಾರಣಾಂತಿಕ ರಸ್ತೆ ಅಪಘಾತದಲ್ಲಿ ತಮ್ಮ ಹೆತ್ತವರಿಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಒಂದು ಕೋ.ರೂ.ಪರಿಹಾರ ನೀಡಲು ಪ್ರಕರಣದ ಆರೋಪಿಯ ತಂದೆ ಒಪ್ಪಿಕೊಂಡ ಬಳಿಕ ಆರೋಪಿಗೆ ಇತ್ತೀಚಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯದ ಪುನಃಸ್ಥಾಪನೆಗಾಗಿ ಅರ್ಜಿದಾರನ ತಂದೆಯ ಪ್ರಯತ್ನಗಳು ಮತ್ತು ತನ್ನ ಮಗನಿಂದ ಉಂಟಾಗಿದ್ದ ಅಪಘಾತದಲ್ಲಿ ಹೆತ್ತವರ ಮರಣದ ಬಳಿಕ ಅನಾಥರಾಗಿರುವ ಮಕ್ಕಳನ್ನು ಬೆಂಬಲಿಸುವ ಅವರ ಬದ್ಧತೆಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಅರವಿಂದ ಕುಮಾರ ಅವರ ಪೀಠವು, ಅರ್ಜಿದಾರನಿಗೆ ಮೂರು ತಿಂಗಳ ಅವಧಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವಾಗುತ್ತದೆ ಎಂದು ಅಭಿಪ್ರಾಯಿಸಿದೆ.
ಆರೋಪಿ ಜಯ ಚಂದ್ರಹಾಸ ಘರತ್‌ಗೆ ಜಾಮೀನು ತಿರಸ್ಕರಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
2024 ಎಪ್ರಿಲ್‌ನಲ್ಲಿ ನವಿಮುಂಬೈನ ಉರನ್ ರೈಲ್ವೆ ನಿಲ್ದಾಣದ ಬಳಿ ಘರತ್ ಚಲಾಯಿಸುತ್ತಿದ್ದ ಕ್ರೆಟಾ ಕಾರು ದಂಪತಿ ಮತ್ತು ಅವರ ಪುತ್ರಿ ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿತ್ತು, ಪರಿಣಾಮವಾಗಿ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಪುತ್ರಿ ತೀವ್ರವಾಗಿ ಗಾಯಗೊಂಡಿದ್ದಳು.
ವಿಚಾರಣೆ ಸಂದರ್ಭ ಅರ್ಜಿದಾರನ ತಂದೆ ವೈದ್ಯಕೀಯ ಚಿಕಿತ್ಸೆ ಮತ್ತು ಅನಾಥ ಮಕ್ಕಳ ಯೋಗಕ್ಷೇಮದ ಜವಾಬ್ದಾರಿಯನ್ನು ತಾನು ವೈಯಕ್ತಿಕವಾಗಿ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ತಕ್ಷಣವೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಕ್ಕಳ ಹೆಸರಿನಲ್ಲಿ 50 ಲಕ್ಷ ರೂ.ಗಳ ಸ್ಥಿರ ಠೇವಣಿಯನ್ನು ಇರಿಸುವುದಾಗಿ ಮತ್ತು ಎರಡು ಕಂತುಗಳಲ್ಲಿ ಇನ್ನೂ 50 ಲಕ್ಷ ರೂ.ಗಳನ್ನು ಠೇವಣಿಯಿರಿಸುವುದಾಗಿಯೂ ಅವರು ವಾಗ್ದಾನ ಮಾಡಿದ್ದರು.
ಮಕ್ಕಳ ಹಿತಾಸಕ್ತಿಗಳನ್ನು ಇನ್ನಷ್ಟು ಸುರಕ್ಷಿತವಾಗಿಸಲು ಸರ್ವೋಚ್ಚ ನ್ಯಾಯಾಲಯವು ಮಕ್ಕಳ ಜೀವನ ಸ್ಥಿತಿಗಳು,ಶಿಕ್ಷಣ ಮತ್ತು ಯೋಗಕ್ಷೇಮದ ಬಗ್ಗೆ ತಿಳಿದುಕೊಳ್ಳಲು ಅವರ ಚಿಕ್ಕಪ್ಪನೊಂದಿಗೆ ಮಾತುಕತೆ ನಡೆಸಿತ್ತು.ಮಕ್ಕಳು ತಮ್ಮ ಚಿಕ್ಕಪ್ಪನೊಂದಿಗೆ ವಾಸವಾಗಿದ್ದಾರೆ ಮತ್ತು ಉರಾನ್‌ನ ಕಾನ್ವೆಂಟ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನುವುದು ದೃಢಪಟ್ಟಿತ್ತು. ಚಿಕ್ಕಪ್ಪ ಈಗಾಗಲೇ ಮಕ್ಕಳ ಶಾಲಾ ಶುಲ್ಕಗಳನ್ನು ಮತ್ತು ಇತರ ವೆಚ್ಚಗಳನ್ನು ಭರಿಸುತ್ತಿದ್ದು, ಇದು ವಾರ್ಷಿಕ 25,000 ರೂ.ಗಳಾಗಿತ್ತು.
ಇದು ಗೊತ್ತಾದ ಬಳಿಕ ಅರ್ಜಿದಾರನ ತಂದೆ ಮಕ್ಕಳ ಶಿಕ್ಷಣ ಮತ್ತು ಜೀವನ ವೆಚ್ಚಕ್ಕಾಗಿ ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 25,000 ರೂ.ಪಾವತಿಸುವುದಾಗಿ ಸ್ವಯಂಪ್ರೇರಣೆಯಿಂದ ಬದ್ಧತೆಯನ್ನು ವ್ಯಕ್ತಪಡಿಸಿದ್ದರು.
ಕ್ರಿಮಿನಲ್ ಪ್ರಕರಣದ ಅಂತಿಮ ತೀರ್ಪು ಏನೇ ಆಗಿರಲಿ, ಪರಿಹಾರದ ಮೊತ್ತವು ಮಕ್ಕಳ ಕಲ್ಯಾಣಕ್ಕಾಗಿ ಉಳಿಯಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.
ಪ್ರಕರಣವನ್ನು ಮುಂದಿನ ಪರಿಗಣನೆಗಾಗಿ ಮೇ. 23ಕ್ಕೆ ಪಟ್ಟಿ ಮಾಡಲಾಗಿದೆ.
ಸೌಜನ್ಯ: barandbench.com