SIRಗೆ ಅಸಹಕಾರ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಡಿ.9: ಪಶ್ಚಿಮ ಬಂಗಾಳ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಅಡ್ಡಿಯನ್ನುಂಟು ಮಾಡಲಾಗುತ್ತಿದೆ ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಬೆದರಿಕೆಯೊಡ್ಡಲಾಗುತ್ತಿದೆ ಎಂಬ ವರದಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಗಂಭೀರವಾಗಿ ಪರಿಗಣಿಸಿದೆ.
SIRಗೆ ಸಹಕರಿಸದ ಕೆಲವು ರಾಜ್ಯಗಳನ್ನು ತರಾಟೆಗೆತ್ತಿಕೊಂಡ ನ್ಯಾಯಾಲಯವು,BLOಗಳು ಬೆದರಿಕೆಯನ್ನು ಎದುರಿಸುತ್ತಿರುವ ಅಥವಾ SIR ಪ್ರಕ್ರಿಯೆಯನ್ನು ನಡೆಸುವಲ್ಲಿ ಅಧಿಕಾರಿಗಳು ಅಡೆತಡೆಗಳನ್ನು ಎದುರಿಸುತ್ತಿರುವ ಯಾವುದೇ ನಿದರ್ಶನವನ್ನು ತಕ್ಷಣ ತನ್ನ ಗಮನಕ್ಕೆ ತರುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.
‘ಇಂತಹ ವಿಷಯಗಳನ್ನು ನಮ್ಮ ಮುಂದೆ ತಂದರೆ ನಾವು ಸೂಕ್ತ ಆದೇಶಗಳನ್ನು ಹೊರಡಿಸುತ್ತೇವೆ’ ಎಂದು ಪೀಠವು ಹೇಳಿತು.
ಪರಿಸ್ಥಿತಿಯನ್ನು ಬಗೆಹರಿಸುವಲ್ಲಿ ವೈಫಲ್ಯವು ಅರಾಜಕತೆಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ ಸರ್ವೋಚ್ಚ ನ್ಯಾಯಾಲಯವು,SIR ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿತು.
ವಿಚಾರಣೆ ವೇಳೆ ಚುನಾವಣಾ ಆಯೋಗವು ನಿರಂತರ ಅಡೆತಡೆಗಳಿಂದಾಗಿ ಅಧಿಕಾರಿಗಳ ಸುರಕ್ಷತೆ ಮತ್ತು SIR ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಪೋಲಿಸ್ ಸಿಬ್ಬಂದಿಗಳ ನಿಯೋಜನೆಯನ್ನು ಪಡೆದುಕೊಳ್ಳುವುದು ತನಗೆ ಅನಿವಾರ್ಯವಾಗಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿತು. SIR ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ BLOಗಳು ಮತ್ತು ಇತರ ಅಧಿಕಾರಿಗಳಿಗೆ ಬೆದರಿಕೆಗಳನ್ನು ತಡೆಯಲು ಅಗತ್ಯವಿರುವ ಎಲ್ಲ ಸಾಂವಿಧಾನಿಕ ಅಧಿಕಾರಗಳನ್ನು ತಾನು ಹೊಂದಿರುವುದಾಗಿ ಅದು ಒತ್ತಿ ಹೇಳಿತು.