ದೇಶದ ಜೈಲುಗಳಲ್ಲಿರುವ ಶೇ.70 ಮಂದಿ ಕೈದಿಗಳ ಅಪರಾಧ ಈವರೆಗೆ ದೃಢಪಟ್ಟಿಲ್ಲ: ಸುಪ್ರೀಂಕೋರ್ಟ್ ನ್ಯಾಯಾಧೀಶ ವಿಕ್ರಮ್ ನಾಥ್
ನ್ಯಾಯಾಧೀಶ ವಿಕ್ರಮ್ ನಾಥ್ | Photo Credit : PTI
ಹೊಸದಿಲ್ಲಿ,ನ.9: ಭಾರತದ ಜೈಲುಗಳಲ್ಲಿರುವ ಕೈದಿಗಳ ಪೈಕಿ ಶೇ.70ರಷ್ಟು ಮಂದಿ, ಇನ್ನೂ ದೋಷಿಗಳೆಂದು ಸಾಬೀತಾಗಿಲ್ಲವೆಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ವಿಕ್ರಮ್ ನಾಥ್ ತಿಳಿಸಿದ್ದಾರೆ. ವಿಚಾರಣಾಧೀನ ವ್ಯಕ್ತಿಗಳ ಬಂಧನವನ್ನು ನಿಭಾಯಿಸುವ ಹಾಗೂ ಅವರಿಗೆ ಕಾನೂನು ನೆರವನ್ನು ಒದಗಿಸುವ ವಿಧಾನದಲ್ಲಿ ತುರ್ತಾಗಿ ಸುಧಾರಣೆಯಾಗಬೇಕಾದ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.
ಬಹುತೇಕ ವಿಚಾರಣಾಧೀನ ಕೈದಿಗಳು ಜೈಲು ಕಂಬಿಗಳ ಹಿಂದಿರುವುದಕ್ಕೆ ಕಾನೂನು ಕಾರಣವಲ್ಲ. ಯಾಕೆಂದರೆ ವ್ಯವಸ್ಥೆಯಿಂದಾಗಿ ಅವರು ವಿಫಲರಾಗಿದ್ದಾರೆಂದು ವಿಕ್ರಮ್ ನಾಥ್ ಹೇಳಿದರು.
ತಮ್ಮ ಮೇಲಿರುವ ಆರೋಪಕ್ಕೆ ಇರುವ ಗರಿಷ್ಠ ಶಿಕ್ಷೆಗಿಂತಲೂ ಅಧಿಕ ಅವಧಿಯನ್ನು ಜೈಲಿನಲ್ಲಿ ಕಳೆದಿರುವ ಅನೇಕ ವಿಚಾರಣಾಧೀನ ಕೈದಿಗಳಿದ್ದಾರೆ. ಜಾಮೀನು ಹಣವನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಜೈಲಿನಲ್ಲಿಯೇ ಉಳಿದುಕೊಂಡಿರುವ ಅನೇಕ ಕೈದಿಗಳಿದ್ದಾರೆ. ಇನ್ನು ಕೆಲವು ಕೈದಿಗಳ ವಿಚಾರಣೆ ಸಮರ್ಪಕವಾಗಿ ನಡೆದಿದ್ದಲ್ಲಿ ಅವರು ಜೈಲಿನಿಂದ ಹೊರಬರಬಹುದಾಗಿತ್ತು ಅಥವಾ ಅವರ ಶಿಕ್ಷೆಯು ಅಮಾನತುಗೊಳ್ಳಬಹುದಾಗಿತ್ತು. ಆದರೆ ಅವರು ಈಗಲೂ ಜೈಲಿನಲ್ಲೇ ಕೊಳೆಯುತ್ತಿದ್ದಾರೆಂದು ನಾಥ್ ಅಭಿಪ್ರಾಯಿಸಿದರು.
ಹೈದರಾಬಾದ್ ನ ನಲ್ಸಾರ್ ಕಾನೂನು ವಿವಿಯು ಆಯೋಜಿಸಿದ್ದ ‘ಪುಣೆ ಹಾಗೂ ನಾಗಪುರದಲ್ಲಿ ನ್ಯಾಯಯುತ ವಿಚಾರಣೆ ಕಾರ್ಯಕ್ರಮದ ವರದಿ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಜೈಲು ಪಾಲಾದ ಅನೇಕ ಮಂದಿಗೆ ತಮಗೆ ಕಾನೂನು ನೆರವನ್ನು ಪಡೆಯುವ ಹಕ್ಕಿದೆ ಎಂಬುದೇ ಅರಿವಿಲ್ಲ. ಆದರೆ ಆ ವಿಷಯ ಗೊತ್ತಿರುವವರಿಗೂ, ತಮ್ಮ ಗತ ಅನುಭವಗಳಿಂದಾಗಿ ವ್ಯವಸ್ಥೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆಂದು ನಾಥ್ ಹೇಳಿದರು. ಬದಲಿಗೆ ಅವರು ಹಣ ಕೊಟ್ಟು ಖಾಸಗಿ ನ್ಯಾಯವಾದಿಯನ್ನು ಗೊತ್ತುಪಡಿಸಿಕೊಳ್ಳುತ್ತಾರೆ.
ನಂಬಿಕೆ ಹಾಗೂ ಸಂಪರ್ಕದ ಕೊರತೆಯು ಸಂವಿಧಾನವು ಭರವಸೆ ನೀಡಿರುವ ಸ್ವಾತಂತ್ರ್ಯ ಹಾಗೂ ಘನತೆನ್ನು ಸೋಲಿಸಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಭಾರತದಲ್ಲಿ ಕಾನೂನು ನೆರವು ಈಗಲೂ ಒಂದಕ್ಕೊಂದು ಸಂಪರ್ಕವನ್ನು ಕಳೆದುಕೊಂಡಂತೆ ಕಾರ್ಯಾಚರಿಸುತ್ತಿದೆ. ನ್ಯಾಯಾಲಯಗಳು, ಕಾರಾಗೃಹಗಳು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳು ಆಗಾಗ್ಗೆ ಪ್ರತ್ಯೇಕವಾಗಿ ಕಾರ್ಯಾಚರಿಸುತ್ತವೆ. ಆದುದರಿಂದ ಈ ವ್ಯವಸ್ಥೆಗಳು ಪ್ರಕರಣದ ಮೊದಲ ವಿಚಾರಣೆಯಿಂದ ಹಿಡಿದು ಅಂತಿಮ ತೀರ್ಪಿನವರೆಗೂ ಉತ್ತರದಾಯಿತ್ವವನ್ನು ಹೊಂದಿರಬೇಕು ಎಂದರು.
ಕಾನೂನು ನೆರವು ನೀಡುವ ಕೆಲಸವನ್ನು ಕಾನೂನು ಸಂಸ್ಥೆಗಳು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಕಾನೂನು ನೆರವಿನ ಸೇವೆಯನ್ನು ನೀಡುವ ಮೂಲಕ ಕಾನೂನು ವಿದ್ಯಾರ್ಥಿಗಳು ವೃತ್ತಿ ಅನುಭವವನ್ನು ಪಡೆಯುವುದಕ್ಕೆ ನೆರವಾಗಬೇಕೆಂದು ನ್ಯಾಯಾಧೀಶ ವಿಕ್ರಮ್ ನಾಥ್ ಕರೆ ನೀಡಿದರು.