ಮೋದಿ ಪ್ರಧಾನಿಯಾಗಿ ಮುಂದುವರಿಯುವುದು ಅಸಾಧ್ಯ: ಉದ್ಧವ್ ಠಾಕ್ರೆ
ನಾಸಿಕ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ವಿಭಜನೆಯಾಗಲಿದೆ. ಮೋದಿ ಪ್ರಧಾನಿಯಾಗಿ ಮುಂದುವರಿಯುವುದು ಅಸಾಧ್ಯ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಭವಿಷ್ಯ ನುಡಿದಿದ್ದಾರೆ.
ನಾಸಿಕ್ ನಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜಬಾಹು ವಾಜೇ ಅವರ ಪರ ಪ್ರಚಾರ ಭಾಷಣ ಮಾಡಿದ ಅವರು, 2014 ಮತ್ತು 2019ರಲ್ಲಿ ನರೇಂದ್ರ ಮೋದಿಯವರ ಪಕ್ಷಕ್ಕೆ ಮತ ಯಾಚಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದರು.
"ನಮ್ಮ ಪಕ್ಷ ಕಾಂಗ್ರೆಸ್ ಜತೆಗೆ ವಿಲೀನವಾಗುತ್ತದೆ ಎಂದು ಹೇಳಿದ್ದೀರಿ. ನನಗೆ ಹೆಚ್ಚು ಕಳಕಳಿ ಇರುವುದು ಬಿಜೆಪಿ ಬಗ್ಗೆ. ಬಿಜೆಪಿ ಜತೆಗೆ 30 ವರ್ಷ ಇದ್ದರೂ, ಅದರೊಂದಿಗೆ ನಾವು ವಿಲೀನವಾಗಿಲ್ಲ. ಜೂನ್ 5ರ ಬಳಿಕ ನೀವು ದೇಶದ ಮಾಜಿ ಪ್ರಧಾನಿ ಎನ್ನುವುದನ್ನು ದೇಶದ ಮತದಾರರು ನಿರ್ಧರಿಸಿದ್ದಾರೆ. ನಿಮ್ಮ ಪಕ್ಷ ಜೂನ್ 5ರಂದು ವಿಭಜನೆಯಾಗಲಿದೆ" ಎಂದು ಮೋದಿ ಹೆಸರನ್ನು ಪ್ರಸ್ತಾಪಿಸದೇ ಪರೋಕ್ಷವಾಗಿ ನುಡಿದರು.
"ನಿಮ್ಮ ಉತ್ತರಾಧಿಕಾರಿ ಬಗ್ಗೆ ನಿಮಗೆ ಯೋಚನೆ ಇದೆಯೇ ಎಂದು ಮೋದಿಯವರನ್ನು ಪ್ರಶ್ನಿಸುತ್ತೇನೆ. ನೀವು ಇನ್ನು ಮುಂದೆ ಪ್ರಧಾನಿಯಾಗಿ ಇರಲಾರಿರಿ. ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸಲು ನಿಮ್ಮ ಪಕ್ಷಕ್ಕೆ ಯಾವ ಮುಖವೂ ಇರುವುದಿಲ್ಲ" ಎಂದು ವ್ಯಂಗ್ಯವಾಡಿದರು. 75 ವರ್ಷ ಬಳಿಕವೂ ನೀವು ಸಕ್ರಿಯ ರಾಜಕಾರಣದಲ್ಲಿ ಇರುತ್ತೀರಾ ಅಥವಾ ಅದು ಆಯ್ದ ರಾಜಕಾರಣಿಗಳಿಗೆ ಮಾತ್ರ ಇರುವ ನಿಯಮವೇ ಎಂದು ಛೇಡಿಸಿದರು.