ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್: 10 ದಿನಗಳಲ್ಲಿ ದಿಲ್ಲಿ, ಉತ್ತರ ಪ್ರದೇಶದಲ್ಲಿ 8 ಕಾರ್ಮಿಕರ ಸಾವು; ಸಾಮಾಜಿಕ ಕಾರ್ಯಕರ್ತರ ಕಳವಳ, ಕ್ರಮಕ್ಕೆ ಆಗ್ರಹ
ಹೊಸದಿಲ್ಲಿ: ಮಲ ಹೊರುವ ಪದ್ಧತಿಯಿಂದಾಗಿ (ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್) ಹತ್ತು ದಿನಗಳ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ದಿಲ್ಲಿಯಲ್ಲಿ ಎಂಟು ಕಾರ್ಮಿಕರ ಸಾವಿನ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರರು, ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ನೈರ್ಮಲ್ಯ ಕಾರ್ಮಿಕರಿಂದ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ದಲಿತ ಆದಿವಾಸಿ ಶಕ್ತಿ ಅಧಿಕಾರ್ ಮಂಚ್ ಮತ್ತು ಜಸ್ಟಿಸ್ ನ್ಯೂಸ್ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ತಕ್ಷಣ ಎಫ್‌ಐಆರ್ ಅನ್ನು ಮಲ ಹೊರುವ ಪದ್ಧತಿ ನಿಷೇಧ ಕಾಯಿದೆ ಹಾಗೂ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂದು ಕೋರಿದ್ದಾರೆ.
ಮೇ 2ರಂದು ಲಕ್ನೌನ ವಝೀರಂಗ್ ಪ್ರದೇಶದಲ್ಲಿ ಒಳಚರಂಡಿ ಜಾಲದ ಕೆಲಸ ಮಾಡುತ್ತಿದ್ದಾಗ 57 ವರ್ಷದ ಕಾರ್ಮಿಕ ಮತ್ತಾತನ 30 ವರ್ಷದ ಪುತ್ರ ಮೃತಪಟ್ಟಿದ್ದರು. ಘಟನೆ ನಡೆದು ಎರಡು ಗಂಟೆಗಳಾದರೂ ಜಲ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಸೇರಿಸುವಷ್ಟರ ಹೊತ್ತಿಗೆ ಅವರು ಮೃತಪಟ್ಟಿದ್ದರು ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ನೊಯ್ಡಾದ ಸೆಕ್ಟರ್ 26ನಲ್ಲಿ ಖಾಸಗಿ ನಿವಾಸದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವಿಷಕಾರಿ ಅನಿಲದಿಂದಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ, ಮುಘಲಸರೈನಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಖಾಸಗಿ ನಿವಾಸದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ನಾಲ್ಕು ಮಂದಿ ಮೃತಪಟ್ಟಿದ್ದರು ಎಂದು ಸ್ವತಂತ್ರ ಪತ್ರಕರ್ತೆ ರಾಧಿಕಾ ಬೊರ್ಡಿಯಾ ಹೇಳಿದ್ದಾರೆ. ಇಂತಹ ಘಟನೆ ನಡೆದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು. ಮೇ 12ರಂದು ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಒಳಚರಂಡಿ ಶುಚಿಗೊಳಿಸುತ್ತಿರುವಾಗ ಓರ್ವ ಕಾರ್ಮಿಕ ಮೃತಪಟ್ಟಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಯಾವುದೇ ರಕ್ಷಣಾ ಸಾಧನಗಳು, ಆಕ್ಸಿಜನ್ ವ್ಯವಸ್ಥೆಯಿಲ್ಲದೆ ಕಾರ್ಮಿಕರಿಂದ ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಿಸಲಾಗುತ್ತಿದೆ ಎಂದು ಹಿರಿಯ ಸುಪ್ರೀಂ ಕೋರ್ಟ್ ವಕೀಲ ಮತ್ತು ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್ ಸ್ಥಾಪಕ ಕಾಲಿನ್ ಗೊನ್ಸಾಲ್ವಿಸ್ ಹೇಳಿದರು.