×
Ad

ದೇಶದ ಕಾನೂನು ವ್ಯವಸ್ಥೆಯು ಕಾನೂನಾತ್ಮಕ ಆಡಳಿತದಿಂದ ನಡೆಯುತ್ತದೆಯೇ ಹೊರತು ಬುಲ್ಡೋಝರ್ ನಿಯಮದಿಂದಲ್ಲ: ಸಿಜೆಐ ಬಿ.ಆರ್.ಗವಾಯಿ

Update: 2025-10-04 22:01 IST

ನ್ಯಾ.ಬಿ.ಆರ್. ಗವಾಯಿ | Photo: ANI

ಹೊಸದಿಲ್ಲಿ,ಅ.4: ಭಾರತದ ಕಾನೂನು ವ್ಯವಸ್ಥೆಯು ಕಾನೂನಾತ್ಮಕ ಆಡಳಿತದಿಂದ ನಿಯಂತ್ರಿಸಲ್ಪಡುತ್ತದೆಯೇ ಹೊರತು ‘ಬುಲ್ಡೋಜರ್ ನಿಯಮ’ದಿಂದಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಹೇಳಿದ್ದಾರೆ.

ಮಾರಿಷಸ್‌ಗೆ ಮೂರು ದಿನಗಳ ಅಧಿಕೃತ ಭೇಟಿಯಲ್ಲಿ ಶುಕ್ರವಾರ ‘ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ಕಾನೂನಿನ ಆಡಳಿತ’ ಕುರಿತು ಸರ್ ಮೌರಿಸ್ ರಾಲ್ಟ್ ಸ್ಮಾರಕ ಉಪನ್ಯಾಸವನ್ನು ನೀಡಿದ ನ್ಯಾ.ಗವಾಯಿ,‘ಬುಲ್ಡೋಝರ್ ನ್ಯಾಯ’ವನ್ನು ಖಂಡಿಸಿದ್ದ ತನ್ನದೇ ತೀರ್ಪನ್ನು ಉಲ್ಲೇಖಿಸಿದರು.

ಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಸರ್ ಮೌರಿಸ್ ರಾಲ್ಟ್ 1978ರಿಂದ 1982ರವರೆಗೆ ಮಾರಿಷಸ್‌ನ ಮುಖ್ಯ ನ್ಯಾಯಾಧೀಶರಾಗಿದ್ದರು.

ಕಾನೂನಿನ ಆಡಳಿತದ ತತ್ವ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಿಂದ ಅದರ ವಿಸ್ತೃತ ವ್ಯಾಖ್ಯಾನವನ್ನು ಎತ್ತಿ ತೋರಿಸಿದ ನ್ಯಾ.ಗವಾಯಿ, ಭಾರತೀಯ ಕಾನೂನು ವ್ಯವಸ್ಥೆಯು ಕಾನೂನಿನ ಆಡಳಿತದಿಂದ ನಿಯಂತ್ರಿಸಲ್ಪಟ್ಟಿದೆ. ಬುಲ್ಡೋಜರ್ ಆಳ್ವಿಕೆಯಿಂದಲ್ಲ ಎಂಬ ಸ್ಪಷ್ಟ ಸಂದೇಶವನ್ನು ತೀರ್ಪು ರವಾನಿಸಿತ್ತು ಎಂದು ಹೇಳಿದರು.

‘ಬುಲ್ಡೋಝರ್ ನ್ಯಾಯ’ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಆಪಾದಿತ ಅಪರಾಧಗಳಿಗೆ ಪ್ರತಿಕ್ರಿಯೆಯಾಗಿ ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸುವುದು ಕಾನೂನು ಪ್ರಕ್ರಿಯೆಗಳನ್ನು ಉಪೇಕ್ಷಿಸುತ್ತದೆ. ಕಾನೂನಿನ ಆಡಳಿತವನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದ ವಿಧಿ 21ರಡಿ ಆಶ್ರಯ ಪಡೆಯುವ ಮೂಲಭೂತ ಹಕ್ಕನ್ನು ಅತಿಕ್ರಮಿಸುತ್ತದೆ ಎಂದು ಎತ್ತಿ ಹಿಡಿದಿದೆ.

ಕಾರ್ಯಾಂಗವು ಏಕಕಾಲದಲ್ಲಿ ನ್ಯಾಯಾಧೀಶ, ತೀರ್ಪುಗಾರ ಮತ್ತು ಶಿಕ್ಷೆ ಜಾರಿಗೊಳಿಸುವರ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು ಎಂದು ನ್ಯಾ.ಗವಾಯಿ ಅವರು ಮಾರಿಷಸ್ ಅಧ್ಯಕ್ಷ ಧರಮ್ಬೀರ ಗೋಖೂಲ, ಪ್ರಧಾನಿ ನವೀನಚಂದ್ರ ರಾಮಗೂಲಂ ಮತ್ತು ಮುಖ್ಯ ನ್ಯಾಯಾಧೀಶೆ ರೆಹಾನಾ ಮುಂಗ್ಲಿ ಗುಲ್ಬುಲ್ ಅವರ ಉಪಸ್ಥಿತಿಯಲ್ಲಿ ನೀಡಿದ ಉಪನ್ಯಾಸದಲ್ಲಿ ಮೆಲುಕು ಹಾಕಿದರು.

ಸಿಜೆಐ ತನ್ನ ಭಾಷಣದಲ್ಲಿ ಮೂಲಭೂತ ರಚನೆಯ ಸಿದ್ಧಾಂತವನ್ನು ತಂದಿದ್ದ ಮತ್ತು ಸಂವಿಧಾನದ ಪ್ರತಿಯೊಂದೂ ಅಂಶವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸಿದ್ದ 1973ರ ಕೇಶವಾನಂದ ಭಾರತಿ ತೀರ್ಪು ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ಹಲವಾರು ಐತಿಹಾಸಿಕ ತೀರ್ಪುಗಳನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದರು.

ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ಬಳಿಕದ 75 ವರ್ಷಗಳಲ್ಲಿ ಕಾನೂನಿನ ಆಡಳಿತದ ಪರಿಕಲ್ಪನೆಯು ಕಾನೂನು ಪಠ್ಯಗಳನ್ನು ಮೀರಿ ವಿಕಸನಗೊಂಡಿದ್ದು, ಸಾಮಾಜಿಕ, ರಾಜಕೀಯ ಮತ್ತು ಸಾಂವಿಧಾನಿಕ ಚರ್ಚೆಗಳನ್ನು ಸಮಾನವಾಗಿ ವ್ಯಾಪಿಸಿದೆ ಎಂದ ನ್ಯಾ.ಗವಾಯಿ ಸಾಮಾಜಿಕ ಕ್ಷೇತ್ರದಲ್ಲಿ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ಕಾನೂನುಗಳನ್ನು ತರಲಾಗಿದೆ ಮತ್ತು ಶೋಷಿತ ಸಮುದಾಯಗಳು ದಬ್ಬಾಳಿಕೆಯ ಬೇರೂರಿರುವ ವ್ಯವಸ್ಥೆಗಳ ವಿರುದ್ಧ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಅವುಗಳನ್ನು ಮತ್ತು ಕಾನೂನಿನ ಆಡಳಿತದ ಭಾಷೆಯನ್ನೇ ಆಗಾಗ್ಗೆ ಬಳಸಿಕೊಂಡಿವೆ ಎಂದು ಹೇಳಿದರು.

‘ಕಾನೂನಿನ ಆಡಳಿತವು ಒಂದು ಕಟ್ಟುನಿಟ್ಟಿನ ಸಿದ್ಧಾಂತವಲ್ಲ. ಅದು ತಲೆಮಾರುಗಳಾದ್ಯಂತ ನ್ಯಾಯಾಧೀಶರು ಮತ್ತು ನಾಗರಿಕರು, ಸಂಸತ್ತುಗಳು ಮತ್ತು ಜನರು, ದೇಶಗಳು ಮತ್ತು ಅವುಗಳ ಇತಿಹಾಸಗಳ ನಡುವಿನ ಸಂವಹನವಾಗಿದೆ. ಅದು ನಾವು ನಮ್ಮನ್ನು ಹೇಗೆ ಘನತೆಯಿಂದ ಆಳಿಕೊಳ್ಳುತ್ತೇವೆ, ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಅಧಿಕಾರದ ಅನಿವಾರ್ಯ ಸಂಘರ್ಷಗಳನ್ನು ನಾವು ಹೇಗೆ ಪರಿಹರಿಸುತ್ತೇವೆ ಎನ್ನುವುದರ ಕುರಿತಾಗಿದೆ’ ಎಂದು ನ್ಯಾ.ಗವಾಯಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News