×
Ad

ಇಸ್ರೋ ವಿಜ್ಞಾನಿ ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನ ನೀಡಿದ ಟ್ಯೂಷನ್‌ ಶಿಕ್ಷಕನ ಬಂಧನ

Update: 2023-08-30 12:35 IST
Photo: Twitter/@LangaMahesh

ಸೂರತ್: ತಾನು ಇಸ್ರೋ ವಿಜ್ಞಾನಿ ಹಾಗೂ ಚಂದ್ರಯಾನ-3 ಮಿಷನ್‌ನ ಲ್ಯಾಂಡರ್‌ ಮಾಡ್ಯೂಲ್‌ ವಿನ್ಯಾಸಗೊಳಿಸಿದವನು ಎಂದು ಹೇಳಿಕೊಂಡು ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದ ಸೂರತ್‌ ನಗರದ ಖಾಸಗಿ ಟ್ಯೂಷನ್‌ ಶಿಕ್ಷಕನೋರ್ವ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಮಿತುಲ್‌ ತ್ರಿವೇದಿ ತನ್ನ ಟ್ಯೂಷನ್‌ ತರಗತಿಗಳಿಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳನ್ನು ಸೆಳೆಯಲು ಈ ತಂತ್ರ ಹೂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇಸ್ರೋದ “ಪ್ರಾಚೀನ ವಿಜ್ಞಾನ ಅನ್ವಯಿಕ ವಿಭಾಗದ” ಸಹಾಯಕ ಚೇರ್‌ಮೆನ್‌ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಹಾಗೂ ಫೆಬ್ರವರಿ 26, 2022 ದಿನಾಂಕ ತೋರಿಸುವ ನಕಲಿ ನೇಮಕಾತಿ ಪತ್ರವನ್ನೂ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನಿಗೂ ಇಸ್ರೋಗೂ ಯಾವುದೇ ಸಂಬಂಧವಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ. ಇಸ್ರೋದ ಮುಂದಿನ ಯೋಜನೆ “ಮರ್ಕ್ಯೂರಿ ಫೋರ್ಸ್‌ ಇನ್‌ ಸ್ಪೇಸ್”ನ ಬಾಹ್ಯಾಕಾಶ ಸಂಶೋಧನಾ ಸದಸ್ಯನೆಂದು ಹೇಳಿಕೊಳ್ಳುವ ನಕಲಿ ಪತ್ರವೂ ಆತನ ಬಳಿ ಇತ್ತು. ಈತ ಬಿ.ಕಾಂ, ಎಂ.ಕಾಂ ಪದವಿ ಹೊಂದಿರುವುದಾಗಿಯೂ ಹೇಳಿಕೊಂಡಿದ್ದ.

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್‌ 419, 465, 468 ಹಾಗೂ 471 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಸಂಬಂಧ ಪೊಲೀಸರು ಇಸ್ರೋ ಅನ್ನು ಸಂಪರ್ಕಿಸಿದ್ದಾರೆ ಹಾಗೂ ಇಸ್ರೋಗೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ತೆ ಹಚ್ಚಿದ್ದಾರೆ. ಈ ಕುರಿತು ಇಸ್ರೋ ಶೀಘ್ರ ವಿಸ್ತೃತ ಉತ್ತರ ನೀಡಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News