×
Ad

ಸ್ವಚ್ಛತಾ ಹಿ ಸೇವಾ ಅಭಿಯಾನ: ಕುಸ್ತಿಪಟು ಅಂಕಿತ ಬೈಯನಪುರಿಯಾ ಜೊತೆ ಕೈಜೋಡಿಸಿದ ಪ್ರಧಾನಿ ಮೋದಿ

Update: 2023-10-01 21:50 IST

Photo : twitter/narendramodi

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಕುಸ್ತಿಪಟು-ಫಿಟ್ನೆಸ್ ಪ್ರಭಾವಿ ಅಂಕಿತ ಬೈಯನಪುರಿಯಾ ಜೊತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ದೇಶಾದ್ಯಂತ ಸಾವಿರಾರು ಜನರು ಪ್ರಧಾನಿ ಕರೆಗೆ ಓಗೊಟ್ಟು ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಂಡಿದ್ದರು.

ಅಂಕಿತ್ ಜೊತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿರುವ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿರುವ ಮೋದಿ, ‘ಇಂದು ದೇಶವು ಸ್ವಚ್ಛತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದು,ಅಂಕಿತ್ ಬ್ಯೆಯನ್ಪುರಿಯಾ ಮತ್ತು ನಾನು ಅದನ್ನೇ ಮಾಡಿದ್ದೇವೆ. ಸ್ವಚ್ಛತೆ ಮಾತ್ರವಲ್ಲ, ಫಿಟ್ನೆಸ್ ಮತ್ತು ಯೋಗಕ್ಷೇಮದ ಬಗ್ಗೆಯೂ ನಾವು ಮಾತನಾಡಿದೆವು ’ ಎಂದು ಹೇಳಿದ್ದಾರೆ.

ಸ್ವಚ್ಛತಾ ಅಭಿಯಾನ ನಿಮ್ಮ ಫಿಟ್ನೆಸ್ ಗೆ ಹೇಗೆ ನೆರವಾಗುತ್ತದೆ ಎಂದು ಮೋದಿ ಪ್ರಶ್ನಿಸಿದ್ದು ವೀಡಿಯೊದಲ್ಲಿ ಕೇಳಿ ಬಂದಿದೆ. ಅದಕ್ಕೆ ಅಂಕಿತ್, ‘ನಮ್ಮ ಪ್ರಕೃತಿಯನ್ನು ಸ್ವಚ್ಛವಾಗಿರಿಸುವುದು ನಮ್ಮ ಜವಾಬ್ದಾರಿ. ಅದು ಸ್ವಚ್ಛವಾಗಿದ್ದರೆ ನಾವೂ ಫಿಟ್ ಆಗಿರುತ್ತೇವೆ ’ ಎಂದು ಉತ್ತರಿಸಿದ್ದಾರೆ.

‘ಮನ್ ಕಿ ಬಾತ್’ನ ಇತ್ತೀಚಿನ ಸಂಚಿಕೆಯಲ್ಲಿ ಮೋದಿ ಅ.1ರಂದು ಎಲ್ಲ ನಾಗರಿಕರಿಂದ ಸ್ವಚ್ಛತೆಗಾಗಿ ಒಂದು ಗಂಟೆಯ ಶ್ರಮದಾನಕ್ಕಾಗಿ ಕೋರಿಕೊಂಡಿದ್ದರು. ಅದು ಮಹಾತ್ಮಾ ಗಾಂಧಿಯವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರಿಗೆ ‘ಸ್ವಚ್ಛಾಂಜಲಿ ’ಯಾಗಲಿದೆ ಎಂದು ಹೇಳಿದ್ದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅಹ್ಮದಾಬಾದಿನಲ್ಲಿ ಬೀದಿಗಳನ್ನು ಗುಡಿಸಿದ್ದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೀತಾಪುರದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ನಡ್ಡಾ ಅವರೂ ದಿಲ್ಲಿಯ ಝಂಡೇನ್ವಾಲನ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಂತಹ ಕ್ರಿಕೆಟಿಗರೂ ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್ ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮತ್ತು ಸ್ವಚ್ಛತೆಗಾಗಿ ಸಂಕಲ್ಪವನ್ನು ಬಲಗೊಳಿಸಲು ನಾಗರಿಕ ನೇತೃತ್ವದ ಅತ್ಯಂತ ದೊಡ್ಡ ಆಂದೋಲನದೊಂದಿಗೆ ಕೈಜೋಡಿಸುವಂತೆ ಜನರನ್ನು ಕೋರಿಕೊಂಡಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News