ಹಣಕಾಸು ಅವ್ಯವಹಾರ ಆರೋಪ | ಸ್ವಾಮಿ ಚೈತನ್ಯಾನಂದಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ
ಸ್ವಾಮಿ ಚೈತನ್ಯಾನಂದ | PC : PTI
ಹೊಸದಿಲ್ಲಿ,ಸೆ.26: ಹಣಕಾಸು ಅಕ್ರಮಗಳ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪಟಿಯಾಳಾ ಹೌಸ್ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ಆರೋಪಗಳ ಸ್ವರೂಪವು ತನಿಖೆಯ ಈ ಹಂತದಲ್ಲಿ ಕಸ್ಟಡಿ ವಿಚಾರಣೆಯನ್ನು ಅಗತ್ಯವಾಗಿಸಿದೆ ಎಂದು ನ್ಯಾಯಾಲಯವು ಹೇಳಿದೆ.
ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವು ನಡೆಸುತ್ತಿರುವ ದಿಲ್ಲಿಯ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಯ ಉಸ್ತುವಾರಿ ಸ್ವಾಮಿ ಚೈತನ್ಯಾನಂದ ಪೀಠದ ಆಸ್ತಿಗಳನ್ನು ಅಕ್ರಮವಾಗಿ ಖಾಸಗಿ ಸಂಸ್ಥೆಗಳಿಗೆ ಉಪಬಾಡಿಗೆಗೆ ನೀಡುವ ಮೂಲಕ ಶಿಕ್ಷಣ ಸಂಸ್ಥೆಯ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದ್ದನ್ನು ತನಿಖೆಯು ಬಹಿರಂಗಗೊಳಿಸಿದೆ ಎಂದು ದಿಲ್ಲಿ ಪೋಲಿಸರು ಹೇಳಿದ್ದಾರೆ.
ಸ್ವಾಮಿ ಚೈತನ್ಯಾನಂದ ವಿರುದ್ಧ ಸಂಸ್ಥೆಯ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಪ್ರಸ್ತುತ ತಲೆಮರೆಸಿಕೊಂಡಿರುವ ಸ್ವಾಮಿ ಚೈತನ್ಯಾನಂದ ಬಂಧನಕ್ಕಾಗಿ ದಿಲ್ಲಿ ಪೋಲಿಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.