×
Ad

ಮಣಿಪುರ ಸಿಎಂ ಗಾದಿಗೆ ಟೇಕ್ವಾಂಡೊ ಮಾಸ್ಟರ್; ಇಬ್ಬರಿಗೆ ಡಿಸಿಎಂ ಹುದ್ದೆ ನಿರೀಕ್ಷೆ

Update: 2026-02-04 07:40 IST

 PC: x.com/htTweets

ಹೊಸದಲ್ಲಿ: ಮಣಿಪುರ ವಿಧಾನಸಭೆಯ ಮಾಜಿ ಸ್ಪೀಕರ್, ಎರಡು ಬಾರಿಯ ಶಾಸಕ ಹಾಗೂ ಟೇಕ್ವಾಂಡೊ ಮಾಸ್ಟರ್ ಯುಮ್ನಮ್ ಖೇಮ್ಚಂದ್ ಸಿಂಗ್ ಮಂಗಳವಾರ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವುದರೊಂದಿಗೆ ರಾಜ್ಯದಲ್ಲಿ ಒಂದು ವರ್ಷದ ರಾಷ್ಟ್ರಪತಿ ಆಡಳಿತ ಅಂತ್ಯಗೊಂಡು ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಲು ರಂಗ ಸಜ್ಜಾಗಿದೆ.

ಜನಾಂಗೀಯ ಸಂಘರ್ಷದಿಂದ ಜರ್ಜರಿತವಾಗಿರುವ ರಾಜ್ಯದಲ್ಲಿ ಕುಕಿ ಮತ್ತು ನಾಗಾ ಸಮುದಾಯದಿಂದ ತಲಾ ಒಬ್ಬರನ್ನು ಉಪಮುಖ್ಯಮಂತ್ರಿಗಳನ್ನಾಗಿ ನಿಯೋಜಿಸಲು ಬಿಜೆಪಿ ಮುಂದಾಗಿದೆ. ಸಿಂಗ್ ಅವರು ಮೈತೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಾಜಿ ಸಚಿವ ಹಾಗೂ ಕುಕಿ ಮುಖಂಡ ನೆಮ್ಚಾ ಕಿಪ್ಜೆನ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಇಂಫಾಲದ ಸಿಂಗ್ಜಮಿಯಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಸಿಂಗ್ (62) ಸರ್ವಸಮ್ಮತ ಆಯ್ಕೆ ಎನಿಸಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರ ಇಳಿಕೆಯಾಗಿದ್ದರೂ, ಉಭಯ ಸಮುದಾಯಗಳು ತಮ್ಮ ಪ್ರಾಬಲ್ಯದ ಪ್ರದೇಶಗಳಿಗೇ ಸೀಮಿತವಾಗಿರುವುದರಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ಬಿಜೆಪಿಯ 37 ಶಾಸಕರ ಪೈಕಿ 35 ಮಂದಿ ಭಾಗವಹಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತರುಣ್ ಛಗ್ ಮತ್ತು ಈಶಾನ್ಯ ಭಾಗದ ಉಸ್ತುವಾರಿ ಹೊಂದಿದ್ದ ಸಂಬಿತ್ ಪಾತ್ರ ಭಾಗವಹಿಸಿದ್ದರು.

ಡಿಸೆಂಬರ್ 9ರಂದು ಕುಕಿ ಸಮುದಾಯದವರು ಇದ್ದ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದ ಸಿಂಗ್, ಆ ಸಮುದಾಯದ ಶಿಬಿರಕ್ಕೆ ಭೇಟಿ ನೀಡಿದ ಮೊದಲ ಮೈತೈ ಶಾಸಕ ಎನಿಸಿದ್ದರು. ಟೇಕ್ವಾಂಡೊದಲ್ಲಿ ಕಳೆದ ವರ್ಷ ಫಿಫ್ತ್ ಡಾನ್ ಬ್ಲಾಕ್ ಆಗಿದ್ದ ಸಿಂಗ್ 2017ರಿಂದ 22ರವರೆಗೆ ಸ್ಪೀಕರ್ ಆಗಿ ಹಾಗೂ ಎರಡನೇ ಅವಧಿಯಲ್ಲಿ ಬಿರೇನ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News