×
Ad

ತಮಿಳುನಾಡು | 14 ವರ್ಷಗಳಿಂದ ವಿಷಯುಕ್ತ ಕಾಲ್ಡ್ರಿಫ್ ಸಿರಪ್ ಉತ್ಪಾದನೆಯಾಗುತ್ತಿದ್ದರೂ ಪತ್ತೆಗೆ ವಿಫಲರಾಗಿದ್ದ ಔಷಧ ನಿಯಂತ್ರಕರು!

Update: 2025-10-08 10:08 IST

PC: x.com/Jansatta

ಚೆನ್ನೈ: ಮಧ್ಯಪ್ರದೇಶದಲ್ಲಿ 17 ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ವಿಷಯುಕ್ತ ಕಾಲ್ಡ್ರಿಫ್ ಕೆಮ್ಮಿನ ಔಷಧಿಯನ್ನು ಉತ್ಪಾದಿಸುತ್ತಿದ್ದ ಶ್ರೀಶನ್ ಫಾರ್ಮಸ್ಯೂಟಿಕಲ್ಸ್, ಕಂಚಿಪುರದ ಶಿಥಿಲ ಕಟ್ಟಡದಲ್ಲಿ, ಅನೈರ್ಮಲ್ಯ ವಾತಾವರಣದಲ್ಲಿ, ಯಾವುದೇ ಸೂಕ್ತ ಸಲಕರಣೆಗಳಿಲ್ಲದೇ ನಿಯಮಗಳನ್ನು ಗಾಳಿಗೆ ತೂರಿ ಕಳೆದ 14 ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಇದನ್ನು ಪತ್ತೆ ಮಾಡುವಲ್ಲಿ ತಮಿಳುನಾಡಿನ ಔಷಧ ನಿಯಂತ್ರಕರು ವಿಫಲವಾಗಿರುವುದು ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ಹಲವು ಸಾವುಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಂಡಿರುವ ತಮಿಳುನಾಡಿನ ಅಧಿಕಾರಿಗಳು, 2011ರಿಂದ ಔಷಧಿ ಉತ್ಪಾದನೆ ಲೈಸನ್ಸ್ ಹೊಂದಿದ್ದ ಕಂಪನಿಯ ಆವರಣವನ್ನು ತಪಾಸಣೆ ಮಾಡಿ ಬೀಗಮುದ್ರೆ ಹಾಕಿದ್ದಾರೆ.

ಮಧ್ಯಪ್ರದೇಶದ ಔಷಧ ನಿಯಂತ್ರಕರು ಪತ್ರ ಬರೆದ ಬಳಿಕ ತಮಿಳುನಾಡು ಅಧಿಕಾರಿಗಳು ತಪಾಸಣೆ ನಡೆಸಿ, ಕಚ್ಚಾವಸ್ತುಗಳ ಖರೀದಿಯಿಂದ ಹಿಡಿದು ಔಷಧ ಉತ್ಪಾದನೆ, ಟೆಸ್ಟಿಂಗ್ ಹಾಗೂ ಪ್ಯಾಕಿಂಗ್ ವರೆಗೆ ಪ್ರತಿ ಹಂತದಲ್ಲಿ 364 ಪ್ರಮುಖ ಉಲ್ಲಂಘನೆಗಳನ್ನು ಪತ್ತೆ ಮಾಡಿದ್ದಾರೆ.

ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಡೈಎಥಲೀನ್ ಗ್ಲೈಕೋಲ್ ಎಂಬ ರಾಸಾಯನಿಕ ಶೇಕಡ 48.6ರಷ್ಟು ಪ್ರಮಾಣ ಕಾಲ್ಡ್ರಿಫ್ ನಲ್ಲಿ ಸೇರಿರುವುದು ಪತ್ತೆಯಾದ ಬಳಿಕ ಅ. 3ರಿಂದ ತಮಿಳುನಾಡಿನ ಔಷಧ ನಿಯಂತ್ರಕರಾದ ಎಸ್.ಗುರುಭಾರತಿ, ಉತ್ಪಾದನೆ, ಮಾರಾಟ ಹಾಗೂ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಫಾರ್ಮಾ ಸಂಸ್ಥೆಗೆ ಆದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News