ತೆಲಂಗಾಣ | ವಿವಾದಿತ ಶಾಸಕ ಟಿ ರಾಜಾ ಸಿಂಗ್ ಬಿಜೆಪಿಗೆ ರಾಜೀನಾಮೆ
Photo | NDTV
ಹೊಸದಿಲ್ಲಿ: ದ್ವೇಷ ಭಾಷಣ ಮತ್ತು ಕೋಮುವಾದಿ ಹೇಳಿಕೆಗಳಿಗೆ ಸುದ್ದಿಯಾಗುತ್ತಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು timesofindia ವರದಿ ಮಾಡಿದೆ.
ರಾಮಚಂದರ್ ರಾವ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಟಿ ರಾಜಾ ಸಿಂಗ್ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸಚಿವ, ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ರಾಜಾ ಸಿಂಗ್, ರಾಮಚಂದರ್ ರಾವ್ ಅವರು ಬಿಜೆಪಿಯ ರಾಜ್ಯ ಘಟಕದ ಮುಂದಿನ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ಮಧ್ಯಮ ವರದಿಯಿಂದ ತಿಳಿದು ಬಂದಿದೆ. ಈ ನಿರ್ಧಾರ ನಮಗೆ ಮಾತ್ರವಲ್ಲದೆ, ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ಆಘಾತ ಮತ್ತು ನಿರಾಶೆಯನ್ನುಂಟುಮಾಡಿದೆ. ತೆಲಂಗಾಣದಲ್ಲಿ ಬಿಜೆಪಿ ಸರಕಾರ ರಚಿಸುವ ಹೊಸ್ತಿಲಲ್ಲಿದೆ. ನಾಯಕತ್ವದ ಆಯ್ಕೆಯು ನಾವು ಸಾಗುತ್ತಿರುವ ದಿಕ್ಕಿನ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ.