ತೆಲಂಗಾಣದಲ್ಲಿ 12,000 ಕೋ. ರೂ. ಮೌಲ್ಯದ ಮಾದಕ ದ್ರವ್ಯ ಜಾಲ ಬೇಧಿಸಿದ ಪೊಲೀಸರು
ಐಟಿ ತಜ್ಞ ಸಹಿತ 12 ಮಂದಿಯ ಬಂಧನ
PC : NDTV
ಹೈದರಾಬಾದ್, ಸೆ. 6: ತೆಲಂಗಾಣದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಮಾದಕ ವಸ್ತು ಉತ್ಪಾದನಾ ಜಾಲವನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪೊಲೀಸರು ಬೇಧಿಸಿದ್ದು, 12,000 ಕೋ.ರೂ. ಮೌಲ್ಯದ ಎಂಡಿ (ಮೆಫೆಡ್ರೋನ್) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ತೆಲಂಗಾಣದ ಚೇರಮಲ್ಲಿ ಪ್ರದೇಶದಲ್ಲಿರುವ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭ ಮಾದಕ ವಸ್ತು ತಯಾರಿಕೆಗೆ ಬಳಕೆ ಮಾಡುವ ಸುಮಾರು 35,000 ಲೀಟರ್ ರಾಸಾನಿಯಕಗಳು ಕೂಡ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಈ ಕಾರ್ಖಾನೆಯಲ್ಲಿ ಮಾದಕ ವಸ್ತುಗಳನ್ನು ಉತ್ಪಾದಿಸಲಾಗುತ್ತಿತ್ತು. ಇದನ್ನು ಸ್ಥಳೀಯ ಕ್ರಿಮಿನಲ್‌ಗಳು ಹಾಗೂ ಏಜೆಂಟ್‌ಗಳ ಮೂಲಕ ಮುಂಬೈಗೆ ಪೂರೈಕೆ ಮಾಡಲಾಗುತ್ತಿತ್ತು. ರಾಸಾಯನಿಕ ತಯಾರಿಕೆಯ ಸೋಗಿನಲ್ಲಿ ಈ ಕಾರ್ಖಾನೆಯಲ್ಲಿ ಮಾದಕ ವಸ್ತುಗಳನ್ನು ಉತ್ಪಾದಿಸಲಾಗುತ್ತಿತ್ತು ಎಂದು ತನಿಖೆ ಬಹಿರಂಗಪಡಿಸಿದೆ.
ಇಲ್ಲಿ ನೂರಾರು ಕಿ.ಗ್ರಾಂ. ಮೆಫೆಡ್ರೋನ್ ಮಾದಕ ವಸ್ತುಗಳನ್ನು ಉತ್ಪಾದಿಸಲಾಗಿದೆ ಹಾಗೂ ಮಾರುಕಟ್ಟೆಗೆ ಪೂರೈಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಸುಮಾರು ಒಂದು ತಿಂಗಳ ಕಾಲ ನಿಗಾ ಇರಿಸಿದ ಬಳಿಕ ಮೀರಾ ಬಾಯಂದರ್, ವಸಾಯಿ ವಿರಾರ್ ಪೊಲೀಸ್ ಹಾಗೂ ಕ್ರೈಮ್ ಬ್ರಾಂಚ್ ಜಂಟಿಯಾಗಿ 60ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಹಾರಾಷ್ಟ್ರದ ಮೀರಾ ರೋಡ್‌ನಲ್ಲಿ ಕಳೆದ ತಿಂಗಳು 24 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳೊಂದಿಗೆ ಬಂಧಿತಳಾಗಿದ್ದ ಬಾಂಗ್ಲಾದೇಶದ ಮಹಿಳೆ ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಪ್ರಧಾನ ಆರೋಪಿ ಮಾಹಿತಿ ತಂತ್ರಜ್ಞಾನದ ತಜ್ಞನಾಗಿದ್ದು, ಅಪರಾಧಕ್ಕಾಗಿ ರಾಸಾಯನಿಕಗಳ ಕುರಿತ ತನ್ನ ಜ್ಞಾನವನ್ನು ಬಳಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.