×
Ad

ನಮ್ಮ ವೆಬ್‌ಸೈಟ್‌ ಗೆ ಕೇಂದ್ರ ಸರಕಾರದಿಂದ ನಿರ್ಬಂಧ: The Wire ಪ್ರಕಟಣೆ

Update: 2025-05-09 14:39 IST

ಹೊಸದಿಲ್ಲಿ: "ನಮ್ಮ ವೆಬ್‌ಸೈಟ್‌ ಗೆ ಕೇಂದ್ರ ಸರಕಾರ ನಿರ್ಬಂಧ ಹೇರಿದೆ" ಎಂದು ತನ್ನ ವಸ್ತುನಿಷ್ಠ ವರದಿಗಳು ಹಾಗೂ ಲೇಖನಗಳಿಗೆ ಹೆಸರುವಾಸಿಯಾಗಿರುವ thewire.in ಸುದ್ದಿ ಸಂಸ್ಥೆ ಹೇಳಿದೆ.

ಈ ಕುರಿತು ಶುಕ್ರವಾರ ಪ್ರಕಟಣೆ ಬಿಡುಗಡೆ ಮಾಡಿರುವ The Wire ಸುದ್ದಿ ಸಂಸ್ಥೆ, "ಭಾರತ ಸರಕಾರ thewire.in ಡಿಜಿಟಲ್ ಮಾಧ್ಯಮ ವೇದಿಕೆಗೆ ಪ್ರವೇಶವನ್ನು ನಿರ್ಬಂಧಿಸಿದ್ದು, ಇದು ಪತ್ರಿಕಾ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯ ಉಲ್ಲಂಘನೆಯಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ವಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತರ್ಜಾಲ ಸೇವೆ ಪೂರೈಕೆದಾರರು ತಿಳಿಸಿದ್ದಾರೆ" ಎಂದು ಹೇಳಿದೆ.

ಭಾರತದ ಪಾಲಿಗೆ ವಿವೇಕಯುತ, ಸತ್ಯಪರ, ನ್ಯಾಯಯುತ ಮತ್ತು ವೈಚಾರಿಕ ಧ್ವನಿಗಳು ಹಾಗೂ ಸುದ್ದಿ ಮತ್ತು ಮಾಹಿತಿಯ ಮೂಲಗಳು ಬಹು ದೊಡ್ಡ ಆಸ್ತಿಯಾಗಿದ್ದು, ದೇಶವು ಸಂಕೀರ್ಣ ಕಾಲಘಟ್ಟದಲ್ಲಿರುವಾಗ, ಇಂತಹ ನಿರ್ಲಜ್ಜ ಸೆನ್ಸರ್ ಶಿಪ್ ಹೇರಿರುವುದನ್ನು ನಾವು ಪ್ರಬಲವಾಗಿ ಪ್ರತಿಭಟಿಸುತ್ತೇವೆ ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ನಿರಂಕುಶ ಹಾಗೂ ಅಸ್ವೀಕಾರಾರ್ಹ ನಡೆಯನ್ನು ಪ್ರಶ್ನಿಸಲು ನಾವು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂತಹ ಕ್ರಮಗಳಿಂದ ನಮ್ಮ ಓದುಗರಿಗೆ ಸತ್ಯ ಹಾಗೂ ನಿಖರ ಸುದ್ದಿಗಳನ್ನು ನೀಡುವುದರಿಂದ ನಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಆದರೆ The Wire ವೆಬ್‌ಸೈಟ್‌ ಕೆಲವು ಬ್ರೌಸರ್ ಗಳಲ್ಲಿ ಈಗಲೂ ಕಾರ್ಯ ನಿರ್ವಹಿಸುತ್ತಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ‌ ʼದಿ ವೈರ್ʼ ನ ಸ್ಥಾಪಕ ಸಂಪಾದಕ ಸಿದ್ದಾರ್ಥ್‌ ವರದರಾಜನ್, "ಸರ್ಕಾರವು 'ದಿ ವೈರ್' ಸೈಟ್ ಅನ್ನು ನಿರ್ಬಂಧಿಸಲು ಆದೇಶ ಹೊರಡಿಸಿರುವುದರಿಂದ, 'ದಿ ವೈರ್' ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಕನಿಷ್ಠ ಎರಡು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಗಳು ತಮ್ಮ ಗ್ರಾಹಕರಿಗೆ ಹೇಳಿವೆ. 'ದಿ ವೈರ್' ಸೈಟ್ ಅನ್ನು ನಿರ್ಬಂಧಿಸುವ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರುವವರೆಗೆ, ಭಾರತದಲ್ಲಿ ಕೆಲವು ಓದುಗರು http://thewire.in ಅನ್ನು ನೇರವಾಗಿ ಪ್ರವೇಶಿಸಲು ಸಾಧ್ಯವಾಗಬಹುದು." ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ VPN ಮೂಲಕ 'ದಿ ವೈರ್' ವೆಬ್ ಸೈಟ್ ಗೆ ಸಂಪೂರ್ಣವಾಗಿ ಪ್ರವೇಶಿಸಬಹುದಾಗಿದೆ, ಆದ್ದರಿಂದ 'ಮೋದಿ' ಮಹಾ ಗೋಡೆಯ ಆಚೆಗೂ ಜೀವನವಿದೆ. ವಿದೇಶದಲ್ಲಿರುವ ಓದುಗರು ಸಹ ನಮ್ಮ ವೆಬ್ ಸೈಟ್ ಗೆ ಪ್ರವೇಶಿಸಬಹುದು, ನಾವು ಶೀಘ್ರದಲ್ಲೇ ಮಿರರ್ ಸೈಟ್ ಅನ್ನು ಪ್ರಾರಂಭಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News