"ದಾವೆಗಳಿಗೆ ಮಿತಿ ಇರಬೇಕು": ಪೂಜಾ ಸ್ಥಳಗಳ ಕಾಯ್ದೆ ಪ್ರಶ್ನಿಸಿ ಹೊಸ ಅರ್ಜಿಗಳ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಆಕ್ರೋಶ
ಹೊಸದಿಲ್ಲಿ: ಪೂಜಾಸ್ಥಳಗಳ(ವಿಶೇಷ ಅವಕಾಶಗಳು) ಕಾಯ್ದೆ, 1991ಅನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಹೆಚ್ಚುವರಿ(ಮಧ್ಯಂತರ) ದಾವೆಗಳಿಗೆ ಮಿತಿ ಇರಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ ಹೇಳಿದೆ.
ಪೂಜಾ ಸ್ಥಳಗಳು (ವಿಶೇಷ ಅವಕಾಶಗಳು) ಕಾಯ್ದೆ-1991 ಅನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ದಾವೆಗಳ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾ. ಪಿ.ವಿ.ಸಂಜಯ್ ಕುಮಾರ್, “ನಾವಿಂದು ಪೂಜಾ ಸ್ಥಳಗಳ ಕಾಯ್ದೆ ಕುರಿತು ಸಲ್ಲಿಕೆಯಾಗಿರುವ ದಾವೆಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಇದು ತ್ರಿಸದಸ್ಯ ಪೀಠಕ್ಕೆ ಸಂಬಂಧಿಸಿದ ವಿಚಾರ. ಈಗಾಗಲೇ ಬಹಳಷ್ಟು ದಾವೆಗಳನ್ನು ಸಲ್ಲಿಸಲಾಗಿದೆ. ಅವುಗಳನ್ನು ಮಾರ್ಚ್ ನಲ್ಲಿ ವಿಚಾರಣೆಗೆ ನಿಗದಿಗೊಳಿಸಲಾಗುವುದು. ಮಧ್ಯಂತರ ದಾವೆಗಳನ್ನು ಸಲ್ಲಿಸಲು ಒಂದು ಮಿತಿಯಿದೆ” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್, ಸಿಪಿಐಎಂಎಲ್, ಜಮಾತೆ ಉಲಾಮ-ಐ-ಹಿಂದ್ ಹಾಗೂ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಮಧ್ಯಂತರ ದಾವೆಗಳನ್ನು ಸಲ್ಲಿಸಿದ್ದಾರೆ. ಅವರೆಲ್ಲರೂ ಕಾಯ್ದೆಯ ಮಾನ್ಯತೆಯನ್ನು ಸಮರ್ಥಿಸಿದ್ದು, ಕಾಯ್ದೆಯನ್ನು ಪ್ರಶ್ನಿಸಿರುವ ದಾವೆಗಳನ್ನು ವಿರೋಧಿಸಿದ್ದಾರೆ.
“ಕಳೆದ ಬಾರಿ ನಾವು ಸಾಕಷ್ಟು ಮಧ್ಯಂತರ ದಾವೆಗಳಿಗೆ ಅವಕಾಶ ನೀಡಿದ್ದೇವೆ” ಎಂದು ನ್ಯಾಯಪೀಠ ಹೇಳಿತು. ಆಗ ಮಧ್ಯಪ್ರವೇಶಿಸಿದ ಹಿರಿಯ ವಕೀಲ ದುಷ್ಯಂತ್ ದವೆ, “ಹೌದು, ಇನ್ನು ಮುಂದೆ ಯಾವುದೇ ದಾವೆಗಳಿಗೆ ಅವಕಾಶ ನೀಡಬಾರದು” ಎಂದು ಅಭಿಪ್ರಾಯಪಟ್ಟರು.
“ಇದುವರೆಗೂ ಉಲ್ಲೇಖಿಸಿರದ ನೆಲೆಯನ್ನು ಹೊಂದಿರುವ ಹೊಸ ದಾವೆಗಳನ್ನು ಮಾತ್ರ ವಿಚಾರಣೆಗೆ ಅಂಗೀಕರಿಸಬೇಕು” ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಪೂಜಾಸ್ಥಳಗಳ ಕಾಯ್ದೆಯನ್ನು ಪ್ರಶ್ನಿಸಿರುವ ಹಾಗೂ ಇದುವರೆಗೂ ಯಾವುದೇ ನೋಟಿಸ್ ಜಾರಿಯಾಗಿರದ ದಾವೆಗಳನ್ನು ವಜಾಗೊಳಿಸಲಾಗಿದೆ ಎಂದೂ ಇದೇ ವೇಳೆ ನ್ಯಾಯಪೀಠ ಹೇಳಿತು. ಅಂತಹ ದಾವೆದಾರರು ಹೊಸ ನೆಲೆಯನ್ನು ಪ್ರತಿಪಾದಿಸಿರುವ ಅರ್ಜಿಗಳನ್ನು ಚಾಲ್ತಿಯಲ್ಲಿರುವ ದಾವೆಗಳಲ್ಲಿ ಸಲ್ಲಿಸಬಹುದಾಗಿದೆ ಎಂದೂ ನ್ಯಾಯಾಲಯ ಹೇಳಿತು.