ಹರ್ಯಾಣದಲ್ಲಿ ಕುಟುಂಬ ಸದಸ್ಯರ ಎದುರಲ್ಲೇ ಮೂವರು ಮಹಿಳೆಯರ ಮೇಲೆ ಅತ್ಯಾಚಾರ: ಪೊಲೀಸರು
Photo: Twitter
ಚಂಡೀಗಢ: ಹರ್ಯಾಣದ ಪಾಣಿಪತ್ ನಲ್ಲಿ ಮೂವರು ಮಹಿಳೆಯರ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳು ಅವರ ಕುಟುಂಬದ ಸದಸ್ಯರ ಮುಂದೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಆರೋಪಿಗಳು ಚಾಕುಗಳು ಹಾಗೂ ಇತರ ಹರಿತವಾದ ಆಯುಧಗಳಿಂದ ಶಸ್ತ್ರಸಜ್ಜಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬಗಳು ವಾಸಿಸುತ್ತಿದ್ದ ಮನೆಗೆ ನುಗ್ಗಿದ್ದ ನಾಲ್ವರು ದುಷ್ಕರ್ಮಿಗಳು ಮೂವರು ಮಹಿಳಾ ಕುಟುಂಬ ಸದಸ್ಯರನ್ನು ಹಗ್ಗಗಳಿಂದ ಕಟ್ಟಿಹಾಕಿದ್ದಾರೆ. ನಂತರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಸಂಭವಿಸಿದ ಸ್ಥಳದಿಂದ ಸುಮಾರು ಒಂದು ಕಿಮೀ ದೂರದಲ್ಲಿ ಬುಧವಾರ ತಡರಾತ್ರಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಅಸ್ವಸ್ಥ ಮಹಿಳೆಯ ಮೇಲೆ ದಾಳಿ ಮಾಡಲಾಗಿದ್ದು, ಆಕೆ ಸಾವನ್ನಪ್ಪಿದ್ದಾಳೆ., ಆಕೆಯ ಪತಿಯನ್ನು ದರೋಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಕೋರರು ದಂಪತಿಯ ಮನೆಗೆ ಬಲವಂತವಾಗಿ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಗ್ಯಾಂಗ್ ಎರಡನೇ ಘಟನೆಯಲ್ಲಿ ಭಾಗಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ದಂಪತಿಯಿಂದ ಸ್ವಲ್ಪ ನಗದು ಮತ್ತು ಮೊಬೈಲ್ ಫೋನ್ ಅನ್ನು ದರೋಡೆಕೋರರು ದೋಚಿದ್ದಾರೆ.
ಎರಡೂ ಘಟನೆಗಳು ಒಂದೇ ಗ್ರಾಮದಲ್ಲಿ ನಡೆದಿವೆ ಎಂದು ಪಾಣಿಪತ್ ನ ಮಟ್ಲೌಡಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ವಿಜಯ್ ಹೇಳಿದ್ದಾರೆ.