ರಾತ್ರೋರಾತ್ರಿ ಕಣ್ಮರೆಯಾಗಿದ್ದ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ಸಕ್ರಿಯ
PC: x.com/IndiaToday
ಮುಂಬೈ,ಜ.30: ರಾತ್ರಿಯಿಡೀ ನಿಷ್ಕ್ರಿಯಗೊಂಡಿದ್ದ ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಶುಕ್ರವಾರ ಬೆಳಿಗ್ಗೆ ಮತ್ತೆ ಸಕ್ರಿಯವಾಗಿದೆ. ವಿಶ್ವದ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಒಬ್ಬರಾದ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಹಠಾತ್ ನಿಷ್ಕ್ರಿಯವಾಗಿರುವುದು ವ್ಯಾಪಕ ಊಹಾಪೋಹ ಮತ್ತು ಅಭಿಮಾನಿಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು.
ಶುಕ್ರವಾರದವರೆಗೆ 27.4 ಕೋಟಿ (274 ಮಿಲಿಯನ್) ಅನುಯಾಯಿಗಳನ್ನು ಹೊಂದಿದ್ದ ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆ ಸಂಪೂರ್ಣವಾಗಿ ಕಾಣೆಯಾಗಿರುವುದು ಲಕ್ಷಾಂತರ ಅಭಿಮಾನಿಗಳಲ್ಲಿ ಗೊಂದಲ ಮತ್ತು ಹತಾಶೆ ಮೂಡಿಸಿತ್ತು.
ವಿರಾಟ್ ಕೊಹ್ಲಿ ಅವರ ಇನ್ಸ್ಟಾಗ್ರಾಂ ಪ್ರೊಫೈಲ್ ತೆರೆಯಲು ಅಭಿಮಾನಿಗಳು ಪ್ರಯತ್ನಿಸಿದಾಗ, “This page isn’t available” ಅಥವಾ “The link may be broken” ಎಂಬ ತಾಂತ್ರಿಕ ಸಂದೇಶಗಳು ಕಂಡು ಬಂದಿತ್ತು. ಭಾರತದ ಮಾಜಿ ನಾಯಕ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ಅದ್ಭುತ ಫಾರ್ಮ್‌ನಲ್ಲಿರುವ ನಡುವೆಯೇ ಈ ಬೆಳವಣಿಗೆ ಸಂಭವಿಸಿರುವುದು ಅಭಿಮಾನಿಗಳನ್ನು ಇನ್ನಷ್ಟು ಅಚ್ಚರಿಗೆ ಕಾರಣವಾಗಿತ್ತು. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 124 ರನ್‌ಗಳ ಶತಕ ಸಿಡಿಸಿದ್ದರು.
ಖಾತೆ ನಿಷ್ಕ್ರಿಯವಾಗಿರುವ ಬಗ್ಗೆ ‘ಕಿಂಗ್ ಕೊಹ್ಲಿ’ ಮೌನ ವಹಿಸಿದ್ದರು. ಇದರಿಂದ ಅಭಿಮಾನಿಗಳು ಮುಂದಿನ ವಿಶ್ವಾಸಾರ್ಹ ಮಾಹಿತಿ ಮೂಲವೆಂದು ಪರಿಗಣಿಸಲಾದ ಅವರ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ ಅವರಿಂದ ಮಾಹಿತಿ ಕೇಳಿದ್ದರು.
ಇತ್ತೀಚೆಗೆ ಕುಟುಂಬದ ಖಾಸಗಿತನ ಹಾಗೂ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಕುರಿತು ದಂಪತಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಅಭಿಮಾನಿಗಳು ಇದು ಜಾಲತಾಣಗಳಿಂದ ಶಾಶ್ವತ ನಿವೃತ್ತಿಯೇ ಅಥವಾ ತಾತ್ಕಾಲಿಕ ವಿರಾಮವೇ ಎಂದು ಪ್ರಶ್ನಿಸಿದ್ದರು.