×
Ad

ತಿರುಪತಿ ಲಡ್ಡು ಕಲಬೆರಕೆ ಹಗರಣ : ಸಿಟ್ ತನಿಖೆಯಲ್ಲಿ ಸಿಬಿಐ ಅಧಿಕಾರಿಯ ಸೇರ್ಪಡೆ ರದ್ದುಪಡಿಸಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

Update: 2025-09-26 20:21 IST

ಸುಪ್ರೀಂಕೋರ್ಟ್ | PTI

ಹೊಸದಿಲ್ಲಿ ,ಸೆ.21: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದ ಪ್ರಸಿದ್ಧ ಲಡ್ಡು ಪ್ರಸಾದವನ್ನು ತಯಾರಿಸಲು ಕಲಬೆರಕೆಯ ತುಪ್ಪವನ್ನು ಬಳಸಲಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಿಬಿಐ ವರಿಷ್ಠರು ನೇಮಿಸಿದ್ದ ಅಧಿಕಾರಿಯನ್ನು ಪಾಲ್ಗೊಳ್ಳುವುದನ್ನು ರದ್ದುಪಡಿಸಿದ್ದ ಆಂಧ್ರಪ್ರದೇಶ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್.ಗವಾಯ್ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ನ್ಯಾಯಪೀಠವು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅವರ ಅರ್ಜಿಯ ಆಲಿಕೆ ಸಂದರ್ಭ ಈ ಆದೇಶವನ್ನು ಹೊರಡಿಸಿದೆ.

ಸುಪ್ರೀಂಕೋರ್ಟ್ ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಭಾಗವಾಗಿರದ ಅಧಿಕಾರಿಯೊಬ್ಬರಿಗೆ ತನಿಖೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಿಬಿಐ ವರಿಷ್ಠರು ನೀಡಿದ್ದ ಅನುಮತಿಯನ್ನು ಆಂಧ್ರ ಹೈಕೋರ್ಟ್ ರದ್ದುಪಡಿಸಿತ್ತು.

ಸಿಬಿಐ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ವಿಷಯವಾಗಿ ಹೈಕೋರ್ಟ್ ನೀಡಿರುವ ಆದೇಶವು ಹಾಲಿ ತನಿಖೆಯನ್ನು ದುರ್ಬಲಗೊಳಿಸಿದೆ. ಮಾತ್ರವಲ್ಲದೆ ವಿಶೇಷ ತನಿಖಾ ತಂಡದ ಕಾರ್ಯನಿರ್ವಹಣೆಯ ಬಗ್ಗೆ ಅನಪೇಕ್ಷಣೀಯವಾದ ಸಂದೇಹಗಳನ್ನು ಮೂಡಿಸಿದೆ ಎಂದು ಹೇಳಿದರು. ಸಿಟ್ ತನಿಖೆ ನಡೆಯುತ್ತಿರುವಾಗ, ದಾಖಲೆಗಳ ನಿರ್ವಹಣೆಯ ಉದ್ದೇಶಕ್ಕಾಗಿ ಮಾತ್ರವೇ ಅಧಿಕಾರಿಯ ನೇಮಕವಾಗಿದೆ ಎಂದು ಸ್ಪಷ್ಟಪಡಿಸಿದರು.

ತಿರುಪತಿ ದೇವಸ್ಥಾನದ ಲಡ್ಡು ತಯಾರಿಯಲ್ಲಿ ಕಲಬೆರಕೆಯ ತುಪ್ಪ ಬಳಕೆಯಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ಸಿಟ್ ತಂಡಕ್ಕೆ ನೆರವಾಗಲು ಜೆ.ವೆಂಕಟರಾವ್ ಅವರನ್ನು ಸಿಬಿಐ ನೇಮಿಸಿರುವುದನ್ನು ರದ್ದುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್ ಆದೇಶ ನೀಡಿದ ಬಳಿಕ ಈ ವಿವಾದ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News