×
Ad

ರಶ್ಯ ಜೊತೆ ವ್ಯಾಪಾರ | ಭಾರತದ ಮೂರು ಕಂಪೆನಿ ಸೇರಿ 45 ಕಂಪೆನಿಗಳಿಗೆ ಯೂರೋಪಿಯನ್‌ ಒಕ್ಕೂಟ ನಿರ್ಬಂಧ

Update: 2025-10-24 17:34 IST

Photo Credit : NDTV

ಹೊಸ ದಿಲ್ಲಿ: ರಶ್ಯ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿರುವ ಕಾರಣಕ್ಕೆ ಗುರುವಾರ ಯೂರೋಪಿಯನ್ ಒಕ್ಕೂಟವು ಭಾರತದ ಮೂರು ಕಂಪೆನಿಗಳು ಸೇರಿದಂತೆ ಒಟ್ಟು 45 ಕಂಪೆನಿಗಳಿಗೆ ನಿರ್ಬಂಧ ಹೇರಿದೆ.

ಏರೋಟ್ರಸ್ಟ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಅಸೆಂಡ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಶ್ರೀ ಎಂಟರ್ ಪ್ರೈಸಸ್ ನಿರ್ಬಂಧಕ್ಕೊಳಗಾಗಿರುವ ಭಾರತೀಯ ಕಂಪೆನಿಗಳಾಗಿವೆ.

ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಶ್ಯ ಮೇಲೆ ಆರ್ಥಿಕ ಒತ್ತಡ ಹೇರುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ 19ನೇ ನಿರ್ಬಂಧಗಳ ಪ್ಯಾಕೇಜ್ ನ ಭಾಗವಾಗಿ ಯೂರೋಪಿಯನ್ ಒಕ್ಕೂಟವು ಈ ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ.

ಯೂರೋಪಿಯನ್ ಒಕ್ಕೂಟದ ಈ ಕ್ರಮಕ್ಕೆ ಭಾರತೀಯ ಅಧಿಕಾರಿಗಳಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

“ಕಂಪ್ಯೂಟರ್ ಸಂಖ್ಯಾತ್ಮಕ ನಿಯಂತ್ರಣ (ಸಿಎನ್ಸಿ), ಯಂತ್ರೋಪಕರಣಗಳು, ಮೈಕ್ರೋಎಲೆಕ್ಟ್ರಾನಿಕ್ಸ್, ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಹಾಗೂ ಇತರ ಸುಧಾರಿತ ತಂತ್ರಜ್ಞಾನಾಧಾರಿತ ಉಪಕರಣಗಳ ಮೇಲೆ ರಫ್ತು ನಿರ್ಬಂಧಗಳನ್ನು ಸಕ್ರಿಯಗೊಳಿಸುವ ಮೂಲಕ ರಶ್ಯದ ಮಿಲಿಟರಿ ಮತ್ತು ಕೈಗಾರಿಕಾ ಸಂಕೀರ್ಣಕ್ಕೆ ನೇರವಾಗಿ ನೆರವು ಒದಗಿಸುವ 45 ಹೊಸ ಕಂಪೆನಿಗಳನ್ನು ಯೂರೋಪಿಯನ್ ಮಂಡಳಿ ಗುರುತಿಸಿದೆ” ಎಂದು ಯೂರೋಪಿಯನ್ ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿದೆ.

“ದ್ವಿ ಬಳಕೆಯ ಸರಕುಗಳು ಮತ್ತು ರಶ್ಯದ ರಕ್ಷಣಾ ಕ್ಷೇತ್ರದ ತಾಂತ್ರಿಕ ವರ್ಧನೆಗೆ ಸಾಮಾನ್ಯವಾಗಿ ಕೊಡುಗೆ ನೀಡಬಹುದಾದ ಉಪಕರಣಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಗಳು ಕಠಿಣ ರಫ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ” ಎಂದು ಅದು ಹೇಳಿದೆ.

“ಈ ಪೈಕಿ 17 ಕಂಪೆನಿಗಳು ರಶ್ಯ ಹೊರತುಪಡಿಸಿ ಬೇರೆ ದೇಶಗಳಲ್ಲಿವೆ. 12 ಕಂಪನಿಗಳು ಹಾಂಗ್ ಕಾಂಗ್ ಸೇರಿದಂತೆ ಚೀನಾದಲ್ಲಿವೆ ಮೂರು ಕಂಪನಿಗಳು ಭಾರತ ಮತ್ತು ಎರಡು ಕಂಪನಿಗಳು ಥೈಲ್ಯಾಂಡ್ ನಲ್ಲಿವೆ” ಎಂದು ಯೂರೋಪಿಯನ್ ಒಕ್ಕೂಟ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News