ಇಂದೋರ್ ಆಸ್ಪತ್ರೆಯಲ್ಲಿ ನವಜಾತ ಶಿಶು ಮೃತ್ಯು ಪ್ರಕರಣ | ಇಲಿ ಕಚ್ಚಿದ ಆರೋಪ; ಆದಿವಾಸಿಗಳಿಂದ ಧರಣಿ
PC : X/@medicaldialogs
ಇಂದೋರ್: ಮಧ್ಯಪ್ರದೇಶದ ಇಂದೋರ್ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಿ ಕಚ್ಚಿದ ಆರೋಪದ ಕುರಿತು ಗಂಭೀರ ಚರ್ಚೆಗೆ ನಡೆಯುತ್ತಿದೆ.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಇಲಿ ಕಚ್ಚಿದ ಬಳಿಕ ಮೃತಪಟ್ಟಿದ್ದಾರೆ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಜೈ ಆದಿವಾಸಿ ಯುವ ಶಕ್ತಿ ಸಂಘಟನೆ ಆಸ್ಪತ್ರೆಯ ಎದುರು ಧರಣಿ ಆರಂಭಿಸಿದೆ.
75 ವರ್ಷಗಳ ಇತಿಹಾಸ ಹೊಂದಿರುವ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಪ್ರತಿಭಟನಾಕಾರರು ಕಾಲೇಜಿನ ಡೀನ್ ಡಾ. ಅರವಿಂದ ಘಂಘೋರಿಯಾ ಹಾಗೂ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
“ಮೃತ ಶಿಶುಗಳು ಉಸಿರಾಟ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿತ್ತು. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿಲ್ಲ. ಆದರೆ ಈಗ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯಲು ತೊಂದರೆ ಉಂಟಾಗಿದೆ” ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಹೇಳಿದ್ದಾರೆ.
ಘಟನೆಯ ನಂತರ ಆರೋಗ್ಯ ಇಲಾಖೆ ಎಂಟು ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಿದ್ದು, ಕೆಲವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಜೊತೆಗೆ, ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ಅವರನ್ನು ದೀರ್ಘಾವಧಿ ರಜೆ ಮೇಲೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.