×
Ad

ಪಾಕಿಸ್ತಾನದಲ್ಲಿ ತಂದೆ-ಮಗಳ ಮದುವೆ ಎಂದು ಸುಳ್ಳು ಸುದ್ದಿ ಪ್ರಕಟಿಸಿದ ಹಲವು ಮಾಧ್ಯಮಗಳು; ವಾಸ್ತವವೇನು?

Update: 2023-07-11 11:46 IST

Screengrab : Twitter 

ಹೊಸದಿಲ್ಲಿ: ಪಾಕಿಸ್ತಾನಿ ಮಹಿಳೆಯೋರ್ವಳು ತನ್ನ ಸ್ವಂತ ತಂದೆಯನ್ನೇ ಮದುವೆಯಾಗಿ ಆತನ ನಾಲ್ಕನೇ ಪತ್ನಿಯಾಗಿದ್ದಾಳೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಹಲವು ಮಾಧ್ಯಮಗಳು ಇದನ್ನೇ ಸುದ್ದಿಯಾಗಿ ಪ್ರಕಟಿಸಿದ್ದವು. ಆದರೆ ಮಾಧ್ಯಮವೊಂದು ನಡೆಸಿದ ಸತ್ಯ ಪರಿಶೀಲನೆಯ ಬಳಿಕ ಇದು ಸುಳ್ಳು ಮತ್ತು ದಾರಿ ತಪ್ಪಿಸುವ ವೀಡಿಯೊ ಎನ್ನುವುದು ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ಮಹಿಳೆಯು ತನ್ನ ತಂದೆಯ ಎರಡನೇ ಪುತ್ರಿ ಹಾಗೂ ತನ್ನ ಪತಿಯ ನಾಲ್ಕನೇ ಪತ್ನಿಯಾಗಿದ್ದಾಳೆ.

ಪಾಕಿಸ್ತಾನದಲ್ಲಿ ವೀಡಿಯೊ ರೆಕಾರ್ಡ್ ಮಾಡಲಾಗಿರುವ ನಿಖರವಾದ ಸ್ಥಳ ಮತ್ತು ದಿನಾಂಕ ದೃಢಪಟ್ಟಿಲ್ಲ. ಆದಾಗ್ಯೂ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಗಮನವನ್ನು ಸೆಳೆದಿದ್ದು, ವ್ಯಾಪಕ ಚರ್ಚೆ ಮತ್ತು ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಇಂತಹದೊಂದು ವಿಲಕ್ಷಣ ಮದುವೆಗೆ ಬಳಕೆದಾರರು ಟೀಕೆ, ಆಘಾತ ಮತ್ತು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪರಿಸ್ಥಿತಿಯ ನೈಜ ಸ್ವರೂಪವನ್ನು ಸ್ಪಷ್ಟಪಡಿಸುವುದು ಮುಖ್ಯವಾಗಿದೆ.

ವೀಡಿಯೊದ ಸತ್ಯಾಸತ್ಯತೆ ಮತ್ತು ನಿರ್ದಿಷ್ಟ ವಿವರಗಳು ದೃಢಪಟ್ಟಿಲ್ಲವಾದರೂ ತನ್ನ ಮದುವೆಯ ಹಿಂದಿನ ಕಾರಣವನ್ನು ವಿವರಿಸಲು ಮಹಿಳೆಯೇ ಸ್ವತಃ ಮುಂದಾಗಿದ್ದಾಳೆ. ವೈರಲ್ ವೀಡಿಯೋದಲ್ಲಿನ ಹೇಳಿಕೆಗೆ ವಿರುದ್ಧವಾಗಿ ಆಕೆ ತನ್ನ ಸ್ವಂತ ತಂದೆಯನ್ನು ಮದುವೆಯಾಗಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾಳೆ. ಆಕೆಯ ‘ರಬಿಯಾ’ ಹೆಸರು ಪಾಕಿಸ್ತಾನಿ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಕುಟುಂಬದಲ್ಲಿಯ ನಾಲ್ಕನೇ ಪುತ್ರಿಯೊಂದಿಗೆ ಗುರುತಿಸಿಕೊಂಡಿರುವುದು ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.

 

ವೈರಲ್ ವೀಡಿಯೊದಲ್ಲಿನ ಹೇಳಿಕೆಗಳನ್ನು ತಿರಸ್ಕರಿಸಿರುವ ಮಹಿಳೆ,‘ನಾನು ನನ್ನ ಹೆತ್ತವರ ನಾಲ್ಕನೇ ಮಗಳಲ್ಲ, ಎರಡನೇ ಮಗಳು.ಇಂತಹ ಸ್ಥಿತಿಯಲ್ಲಿ ನಾನು ನನ್ನ ಹೆಸರಿಗೆ ಹೊಂದಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾಳೆ. ಮಹಿಳೆಯ ವಿವರಣೆಯು ಪಾಕಿಸ್ತಾನದಲ್ಲಿ ಹೆಸರುಗಳಿಗೆ ನೀಡಲಾಗಿರುವ ಸಾಂಸ್ಕೃತಿಕ ಮಹತ್ವದ ಮೇಲೆ ಬೆಳಕು ಚೆಲ್ಲಿದೆ. ಪಾಕಿಸ್ತಾನದಲ್ಲಿ ಕೆಲವು ಹೆಸರುಗಳು ಸಾಂಪ್ರದಾಯಿಕವಾಗಿ ಜನನ ಕ್ರಮ (ಕುಟುಂಬದಲ್ಲಿ ಮಗು ಜನಿಸಿದ ಕ್ರಮ)ದೊಂದಿಗೆ ಗುರುತಿಸಿಕೊಂಡಿವೆ.

ಟ್ವಿಟರ್ ಬಳಕೆದಾರ ಹಮೀದ್ ದೇಸಾಯಿ ಈ ವೀಡಿಯೊನ್ನು ಶೇರ್ ಮಾಡಿಕೊಂಡಿದ್ದು, ಅದು ಅನೇಕ ಬಳಕೆದಾರರ ಗಮನವನ್ನು ಸೆಳೆದಿತ್ತು. ಆದರೆ ಮಹಿಳೆಯೇ ಸ್ವತಃ ದೃಢಪಡಿಸಿರುವಂತೆ ಟ್ವೀಟ್ ಮತ್ತು ನಂತರದ ಚರ್ಚೆಗಳು ತಪ್ಪು ಮಾಹಿತಿಯನ್ನು ಆಧರಿಸಿದ್ದವು.

ಸತ್ಯ ಪರಿಶೋಧನೆಯ ಬಳಿಕ,ಪಾಕಿಸ್ತಾನಿ ಮಹಿಳೆ ತನ್ನ ಸ್ವಂತ ತಂದೆಯನ್ನೇ ಮದುವೆಯಾಗಿ ಆತನ ನಾಲ್ಕನೇ ಪತ್ನಿಯಾಗಿದ್ದಾಳೆ ಎನ್ನುವ ಹೇಳಿಕೆ ಸಂಪೂರ್ಣ ಸುಳ್ಳು ಎನ್ನುವುದು ಸಾಬೀತಾಗಿದೆ. ತನ್ನ ತಂದೆಯ ಎರಡನೇ ಪುತ್ರಿಯಾಗಿರುವ ಮಹಿಳೆ ತಾನು ತನ್ನ ಪತಿಯನ್ನು ಮದುವೆಯಾಗಿದ್ದೇನೆ, ತಂದೆಯನ್ನಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಆಕೆಯ ಹೆಸರು ಮತ್ತು ಜನನ ಕ್ರಮದ ನಡುವಿನ ಸಾಂಸ್ಕೃತಿಕ ಸಂಬಂಧ ಗೊಂದಲಗಳಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊಗಳು ಅಥವಾ ದೃಢಪಡದ ಹೇಳಿಕೆಗಳ ಆಧಾರದಲ್ಲಿ ನಿರ್ಧಾರಕ್ಕೆ ಬರುವ ಮುನ್ನ ವಿವೇಚನೆ ಮತ್ತು ಮಾಹಿತಿಯನ್ನು ದೃಢಪಡಿಸಿಕೊಳ್ಳುವುದು ಮುಖ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News