×
Ad

ಸೈನ್ ಬೋರ್ಡ್ ನಲ್ಲಿ ಪಾಕ್ ಪರ ಘೋಷಣೆ ಪ್ರದರ್ಶನ ಆರೋಪ: ಇಬ್ಬರು ಅಂಗಡಿ ಮಾಲೀಕರ ಬಂಧನ

Update: 2025-11-06 08:29 IST

PC: screengrab/x.com/vani_mehrotra

ಗೋವಾ: ಎಲ್ಇಡಿ ಸೈನ್ ಬೋರ್ಡ್ ನಲ್ಲಿ "ಪಾಕಿಸ್ತಾನ್ ಝಿಂದಾಬಾದ್" ಘೋಷಣೆಯನ್ನು ಪ್ರದರ್ಶಿಸಿದ ಆರೋಪದಲ್ಲಿ ಇಬ್ಬರು ಅಂಗಡಿ ಮಾಲೀಕರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಬಗಾದಲ್ಲಿರುವ ರಿವೈವ್ ಹೇರ್ ಕಟ್ಟಿಂಗ್ ಸಲೂನ್ ಮತ್ತು ಅರ್ಪೊರಾದಲ್ಲಿರುವ ವಿಸ್ಕಿ ಪೀಡಿಯಾದ ಎಲ್ಇಡಿ ಸಂಪರ್ಕವನ್ನು ಕಿತ್ತಹಾಕಲಾಗಿದ್ದು, ಇಬ್ಬರ ವಿರುದ್ಧ ಭಾರತೀಯ ನ್ಯಾಯಸಂಹಿತೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ತಂದ ಆರೋಪ ಹೊರಿಸಲಾಗಿದೆ.

"ಅನುಮತಿ ಇಲ್ಲದೇ ಈ ಫಲಕ ಪ್ರದರ್ಶಿಸಲಾಗಿತ್ತು. ಪೊಲೀಸರು ಈಗಾಗಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ" ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

"ಆರೋಪಿಗಳು ಉದ್ದೇಶಪೂರ್ವಕವಾಗಿ ಪಾಕಿಸ್ತಾನ ಝಿಂದಾಬಾದ್ ಎಂಬ ಘೋಷಣೆಯನ್ನು ಎಲ್ಇಡಿ ಫಲಕದಲ್ಲಿ ಸ್ಕ್ರೋಲಿಂಗ್ ರೀತಿಯಲ್ಲಿ ಪ್ರದರ್ಶಿಸಿದ್ದರು. ಈ ಮೂಲಕ ಸ್ಥಳೀಯರ ಭೀತಿ, ಕೋಪ ಮತ್ತು ಪ್ರಚೋದನೆಗೆ ಕಾರಣರಾಗಿದ್ದಾರೆ. ಇಂಟರ್ನೆಟ್/ ಕಂಪ್ಯೂಟರ್ ಸಿಸ್ಟಂಗೆ ಸಾಧನ ಸಂಪರ್ಕಿಸಿ ದೇಶದ್ರೋಹಿ, ದೇಶವಿರೋಧಿ ಘೋಷಣೆ ಪ್ರದರ್ಶಿಸುವ ಮೂಲಕ ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಅಪಾಯ ತಂದಿದ್ದು, ಸಾರ್ವಜನಿಕ ಪ್ರಕ್ಷುಬ್ಧತೆ ಮತ್ತು ಆಕ್ರೋಶಕ್ಕೆ ಕಾರಣರಾಗಿದ್ದಾರೆ" ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News