×
Ad

ಮಹಾರಾಷ್ಟ್ರ ಪಾವತಿಸುವ ತೆರಿಗೆಯಲ್ಲಿ ಶೇ. 50ರಷ್ಟನ್ನು ಮರಳಿಸಿ: ಕೇಂದ್ರ ಸರ್ಕಾರಕ್ಕೆ ಉದ್ಧವ್ ಠಾಕ್ರೆ ಆಗ್ರಹ

Update: 2024-02-12 11:55 IST

ಉದ್ಧವ್ ಠಾಕ್ರೆ (PTI)

ಮುಂಬೈ: ಕೇಂದ್ರ ಸರ್ಕಾರವು ಮಹಾರಾಷ್ಟ್ರದಿಂದ ಸಂಗ್ರಹಿಸುವ ತೆರಿಗೆ ನಿಧಿಯ ಪೈಕಿ ಶೇ. 50ರಷ್ಟನ್ನು ರಾಜ್ಯದ ಅಭಿವೃದ್ಧಿಗಾಗಿ ಮರು ಪಾವತಿಸಬೇಕು ಎಂದು ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರವಿವಾರ ಮುಂಬೈನಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಇತ್ತೀಚೆಗೆ ದಿಲ್ಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಇಂತಹುದೇ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸಿದ್ದನ್ನು ಉಲ್ಲೇಖಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯವು ಕೇಂದ್ರಕ್ಕೆ ರೂ. ಒಂದು ತೆರಿಗೆ ಪಾವತಿಸಿದರೆ, ಅದಕ್ಕೆ ಪ್ರತಿಯಾಗಿ ಕೇವಲ ಏಳು ಪೈಸೆಯನ್ನು ಮರಳಿ ಪಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

"ಉಳಿದ ಮೊತ್ತವು ಏನಾಗುತ್ತಿದೆ? ಯಾವ ಬಗೆಯ ಕೊಡುಗೆಗಳನ್ನು ನೀವು ನೀಡುತ್ತಿದ್ದೀರಿ?" ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

"ಮಹಾರಾಷ್ಟ್ರ ರಾಜ್ಯವು ನಿಮಗೆ ಒಂದು ರೂಪಾಯಿ ನೀಡಿದರೆ, ರಾಜ್ಯದ ಅಭಿವೃದ್ಧಿಗಾಗಿ ಅದರಲ್ಲಿ ಅರ್ಧ ಭಾಗವನ್ನು ಮರಳಿಸಿ ಎಂದು ನಾನು ಪ್ರತಿಪಾದಿಸುತ್ತಿದ್ದೇನೆ. ನೀವು ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ. ನಾವು (ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ) ಅಧಿಕಾರಕ್ಕೆ ಬಂದ ನಂತರ, ಮಹಾರಾಷ್ಟ್ರದ ತೆರಿಗೆ ಪಾಲನ್ನು ಏರಿಕೆ ಮಾಡಲು ಚಾಲ್ತಿಯಲ್ಲಿರುವ ತೆರಿಗೆ ಸೂತ್ರವನ್ನು ಮಾರ್ಪಡಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಬದ್ಧತೆಯಾದ "ಮೋದಿ ಕಿ ಗ್ಯಾರಂಟಿ" ವಿರುದ್ಧವೂ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿಯವರ ಭರವಸೆಯು ಮಹಾರಾಷ್ಟ್ರದಂಥ ರಾಜ್ಯಗಳಿಂದ ಸಂಗ್ರಹಿಸಲಾಗುತ್ತಿರುವ ತೆರಿಗೆಯನ್ನು ಅವಲಂಬಿಸಿದೆ ಎಂದು ಕುಟುಕಿದ್ದಾರೆ.

ಇದಕ್ಕೂ ಮುನ್ನ, ಫೆಬ್ರವರಿ 7ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಇದಾದ ಮರು ದಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್ ನಾಯಕರು ಪ್ರತಿಭಟನೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News