×
Ad

ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ಮೃತದೇಹ ಸ್ವದೇಶಕ್ಕೆ

ವಿದ್ಯಾರ್ಥಿ ವೀಸಾದಲ್ಲಿ ರಶ್ಯಕ್ಕೆ ತೆರಳಿದವರನ್ನು ಬಲವಂತವಾಗಿ ರಶ್ಯದ ಸೇನೆಗೆ ಸೇರ್ಪಡೆ!

Update: 2025-12-18 20:29 IST

ಅಜಯ್ ಗೋದಾರ | Photo Credit  : Special Arrangement \ thehindu.com 

ಹೊಸದಿಲ್ಲಿ,ಡಿ.17: ರಶ್ಯ ಹಾಗೂ ಉಕ್ರೇನ್ ಯುದ್ದ ಭೂಮಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಮೃತದೇಹಗಳನ್ನು ಬುಧವಾರ ದಿಲ್ಲಿ ವಿಮಾನನಿಲ್ದಾಣಕ್ಕೆ ಆಗಮಿಸಿವೆ.

ಈ ವರ್ಷದ ಸೆಪ್ಟೆಂಬರ್ ತಿಂಗಳಿನಿಂದೀಚೆಗೆ ಉಕ್ರೇನ್ ಯುದ್ದ ವಲಯದಲ್ಲಿ ಕನಿಷ್ಠ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ ಹಾಗೂ ಇತರ 59 ಮಂದಿ ನಾಪತ್ತೆಯಾಗಿದ್ದಾರೆ. ಇವರಿಬ್ಬರನ್ನೂ ಬಲವಂತವಾಗಿ ರಶ್ಯಸೇನೆಗೆ ಸೇರ್ಪಡೆಗೊಳಿಸಲಾಗಿದ್ದು, ಅವರನ್ನು ಉಕ್ರೇನ್ ವಿರುದ್ಧ ಕಾದಾಡಲು ಯುದ್ಧರಂಗಕ್ಕೆ ಕಳುಹಿಸಲಾಗಿತ್ತೆಂದು ತಿಳಿದುಬಂದಿದೆ.

ಮೃತಪಟ್ಟವರನ್ನು ರಾಜಸ್ಥಾನದ ನಿವಾಸಿ ಅಜಯ್ ಗೋದಾರ (22) ಹಾಗೂ ಉತ್ತರಾಖಂಡ ನಿವಾಸಿ ರಾಕೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆ ಅಜಯ್ ಹಾಗೂ ರಾಕೇಶ್ ಇಬ್ಬರೂ ವಿದ್ಯಾರ್ಥಿ ವೀಸಾದಲ್ಲಿ ರಶ್ಯಾಕ್ಕೆ ತೆರಳಿದ್ದರು. ಆದರೆ ಅವರಿಗೆ ಸಫಾಯಿ ಕಾರ್ಮಿಕರಾಗಿ ಅಥವಾ ಕ್ಲೀನರ್‌ ಗಳಾಗಿ ಕೆಲಸ ಕೊಡಿಸುವ ಸುಳ್ಳು ಭರವಸೆ ನೀಡಿ, ಅವರನ್ನು ರಶ್ಯ ಸೇನೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು ಎನ್ನಲಾಗಿದೆ.

ಮೃತ ಅಜಯ್ ಗೋದಾರ ಅವರ ಸೋದರ ಸಂಬಂಧಿ ಪ್ರಕಾಶ್ ಗೋದಾರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಡಿಸೆಂಬರ್ 9ರಂದು ಅಜಯ್ ಸಾವಿನ ಬಗ್ಗೆ ಮಾಹಿತಿಯನ್ನು ನೀಡಿತ್ತು ಎಂದು ತಿಳಿಸಿದರು.

‘‘ಅಜಯ್ ಅವರು ಸೆಪ್ಟೆಂಬರ್ 21ರಂದು ಕೊನೆಯ ಬಾರಿಗೆ ಆತನ ಕುಟುಂಬಿಕರೊಂದಿಗೆ ಮಾತನಾಡಿದ್ದರು. ಆನಂತರ ಅವರಿಂದ ಯಾವುದೇ ರೀತಿಯ ಸಂಪರ್ಕವಿರಲಿಲ್ಲ. ಆದರೆ ಸಂಪರ್ಕವನ್ನು ಕಡಿದುಕೊಳ್ಳುವ ಮುನ್ನ ಅವರು ಸಹಾಯಕ್ಕಾಗಿ ಯಾಚಿಸಿದ್ದರು. ತಮ್ಮನ್ನು ಬಲವಂತವಾಗಿ ಯುದ್ಧರಂಗಕ್ಕೆ ಕಳುಹಿಸಲಾಗಿದೆಯೆಂಬುದಾಗಿ ಆತ ಹೇಳಿಕೊಂಡಿದ್ದ’’ ಎಂದು ಪ್ರಕಾಶ್ ಗೋದಾರ ತಿಳಿಸಿದರು.

ಅಜಯ್ ಅವರ ಪಾರ್ಥಿವಶರೀರವನ್ನು ಅವರ ಕುಟುಂಬವು ಹುಟ್ಟೂರಾದ ರಾಜಸ್ಥಾನದ ಬಿಕಾನೇರ್‌ ಗೆ ಕೊಂಡೊಯ್ದು, ಅಂತ್ಯಸಂಸ್ಕಾರವನ್ನು ಬುಧವಾರ ಸಂಜೆ ನೆರವೇರಿಸಿದೆ. ಅಜಯ್ ಅವರು ತಂದೆ,ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಸಕ್ರಿಯವಾದ ಮಿಲಿಟರಿ ಸೇವೆಯಲ್ಲಿ ತೊಡಗಿದ್ದಾಗ ಆತ ಮೃತಪಟ್ಟಿರುವುದಾಗಿ ರಶ್ಯವು ನೀಡಿರುವ ಮರಣಪ್ರಮಾಣಪತ್ರದಲ್ಲಿ ತಿಳಿಸಿರುವುದಾಗಿ ಪ್ರಕಾಶ್ ಹೇಳಿದ್ದಾರೆ.

ಭಾರತೀಯ ಪ್ರಜೆಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗುವುದಿಲ್ಲವೆಂದು ರಶ್ಯವು ಕಳೆದ ವರ್ಷ ಭರವಸೆ ನೀಡಿದ ಹೊರತಾಗಿಯೂ, ರಶ್ಯನ್ ಭೂಸೇನೆಗೆ ಭಾರತೀಯರನ್ನು ಸೇರ್ಪಡೆಗೊಳಿಸುತ್ತಿರುವುದು ಮುಂದುವರಿದಿದೆಯೆಂದು ಮಾಧ್ಯಮಗಳು ಕಳವಳ ವ್ಯಕ್ತಪಡಿಸಿವೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾರತ ಭೇಟಿಗೆ ಮುಂಚಿತವಾಗಿ ರಶ್ಯದ ಸೇನೆಗೆ ಸೇರ್ಪಡೆಗೊಳಿಸಲಾದ 61 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರಬೇಕೆಂಅದು ರಾಜಸ್ಥಾನದ ನಾಗೌರ್‌ ನ ಲೋಕಸಭಾ ಸದಸ್ಯ ಹನುಮಾನ್ ಬೆನಿವಾಲ್ ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News