IGNOUನ ಪ್ರಪ್ರಥಮ ಮಹಿಳಾ ಕುಲಪತಿಯಾಗಿ ಉಮಾ ಕಾಂಜಿಲಾಲ್ ನೇಮಕ
ಉಮಾ ಕಾಂಜಿಲಾಲ್ | Credit: X/@uma_kanjilal
ಹೊಸದಿಲ್ಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾದ ನಾಲ್ಕು ದಶಕಗಳ ನಂತರ, ಪ್ರಪ್ರಥಮ ಮಹಿಳಾ ಉಪ ಕುಲಪತಿಯಾಗಿ ಉಮಾ ಕಾಂಜಿಲಾಲ್ ನೇಮಕವಾಗಿದ್ದಾರೆ ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, “ಮುಕ್ತ ಹಾಗೂ ದೂರ ಶಿಕ್ಷಣ ವ್ಯವಸ್ಥೆಯಲ್ಲಿ 36 ವರ್ಷಗಳ ಸೇವೆ ಸಲ್ಲಿಸಿರುವ ಉಮಾ ಕಾಂಜಿಲಾಲ್, ತಮ್ಮ ಶೈಕ್ಷಣಿಕ ನಾಯಕತ್ವ, ಡಿಜಿಟಲ್ ಆವಿಷ್ಕಾರ ಹಾಗೂ ಸಾಂಸ್ಥಿಕ ಜ್ಞಾನದ ಮೂಲಕ, ವಿಶ್ವದ ಅತ್ಯಂತ ದೊಡ್ಡ ಮುಕ್ತ ವಿಶ್ವವಿದ್ಯಾಲಯಗಳ ಪೈಕಿ ಒಂದಾದ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಆಡಳಿತದ ಪಾಲಿಗೆ ಒಂದು ಆಸ್ತಿಯಾಗಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
“ಅವರೀಗ ವಿಶ್ವವಿದ್ಯಾಲಯದ ಸಕ್ರಿಯ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮುನ್ನ ಅವರು, ಮಾರ್ಚ್ 2021ರಿಂದ ಜುಲೈ 2024ರವರೆಗೆ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು” ಎಂದು ಅವರು ತಿಳಿಸಿದ್ದಾರೆ.
2003ರಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪ್ರಾಧ್ಯಾಪಕರಾಗಿರುವ ಉಮಾ ಕಾಂಜಿಲಾಲ್, ಇ-ಕಲಿಕೆ, ಗ್ರಂಥಾಲಯಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಅಳವಡಿಕೆ, ಡಿಜಿಟಲ್ ಗ್ರಂಥಾಲಯಗಳು ಹಾಗೂ ಬಹು ಮಾಧ್ಯಮ ತರಬೇತಿ ಸಾಮಗ್ರಿಗಳ ಅಭಿವೃದ್ಧಿಯಲ್ಲಿ ತಜ್ಞರೆಂದು ಖ್ಯಾತರಾಗಿದ್ದಾರೆ. ಸದ್ಯ ಅವರು ಶಿಕ್ಷಣ ಸಚಿವಾಲಯದ ಮಹತ್ವಾಕಾಂಕ್ಷಿ ಉಪಕ್ರಮವಾದ SWAYAM ಮತ್ತು SWAYAM PRABHA ಯೋಜನೆಗಳ ರಾಷ್ಟ್ರೀಯ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.